ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)- 2009 ರ ನಿಯಮಗಳು ವಸತಿ ಶಾಲೆಗಳಿಗೂ ಅನ್ವಯಿಸುತ್ತವೆ ಎಂದು ತೀರ್ಪು ನೀಡಿರುವ ಹೈಕೋರ್ಟ್, ಆರ್‌ಟಿಇ ಅಡಿ ಅನುಮತಿ ಪಡೆಯದ ಶಾಲೆಗೆ 1.60 ಕೋಟಿ ರೂಪಾಯಿ ದಂಡ ವಿಧಿಸಿರುವ ಕ್ರಮ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ತಾವು ಶಾಲೆ ನಡೆಸುತ್ತಿದ್ದರೂ ಆರ್ಟಿಇ ಅಡಿ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ 1 ಕೋಟಿ 60 ಲಕ್ಷ ದಂಡ ವಿಧಿಸಿರುವ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿ ಮೈಸೂರಿನ ಜ್ಞಾನ ಸರೋವರ ಎಜುಕೇಷನ್ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಸತಿ ಶಾಲೆಗಳೂ ಆರ್ಟಿಇ ಅಡಿ ಬರುತ್ತವೆ. ಹೀಗಾಗಿ ದಂಡ ವಿಧಿಸಿರುವ ಕ್ರಮದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: ಡಿ.ಬಾಲಕೃಷ್ಣಪ್ಪ ಮತ್ತು ವಿಲಿಯಂ ಯೇಸುದಾಸ್ ಎಂಬುವವರು ಮೈಸೂರಿನ ಜ್ಞಾನ ಸರೋವರ ಎಜುಕೇಷನ್ ಟ್ರಸ್ಟ್ ನಡೆಸುತ್ತಿರುವ ವಸತಿ ಶಾಲೆ ಆರ್‌ಟಿಇ ಅಡಿ ಮಾನ್ಯತೆ ಪಡೆದಿಲ್ಲ. ಹೀಗಾಗಿ, ಶಾಲೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಸಂಬಂಧ ಅಧಿಕಾರಿಗಳು 2016ರಲ್ಲಿ ಶಾಲೆಯ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದರು. ಅವರು ಹಾಜರಾಗದ ಹಿನ್ನೆಲೆಯಲ್ಲಿ 2017ರ ಜ.12ರಂದು ಶಿಕ್ಷಣ ಇಲಾಖೆ ಮತ್ತೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ಶಾಲೆ, ‘ನಮ್ಮದು ವಸತಿ ಶಾಲೆಯಾಗಿದ್ದು ಆರ್‌ಟಿಇ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ’ ಎಂದಿತ್ತು.
ಆ ಬಳಿಕ ಜಿಲ್ಲಾ ಪಂಚಾಯ್ತಿ ಸಿಇಒ, ಡಿಡಿಪಿಐಗೆ ಆರ್‌ಟಿಇ ಕಾಯ್ದೆ ಸೆಕ್ಷನ್ 18 ನ್ನು ಪಾಲನೆ ಮಾಡದಿರುವ ಹಿನ್ನೆಲೆಯಲ್ಲಿ ತನಿಖೆಗೆ ಸೂಚಿಸಿದ್ದರು. ಜತೆಗೆ ಶೋಕಾಸ್ ನೀಡಿ, ನಿಯಮ ಉಲ್ಲಂಘಿ ಸಿರುವುದಕ್ಕೆ ನಿಮಗೆ ದಂಡ ವಿಧಿಸಬಾರದೇಕೆ ಎಂದು ಕೇಳಿದ್ದರು. ಅಂತಿಮವಾಗಿ ಶಾಲೆಯು ನಿಯಮ ಪಾಲಿಸದೇ ಇರುವುದು ಕಂಡಬಂದ ಹಿನ್ನೆಲೆಯಲ್ಲಿ ಡಿಡಿಪಿಐ 2021ರ ನ.23ರಂದು 1,60,50,000 ರೂಪಾಯಿ ದಂಡ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು.
ತೀರ್ಪಿನ ಸಾರಾಂಶ: ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಆರ್‌ಟಿಇ ಕಾಯ್ದೆ ನಿಯಮ 18ರ ಪ್ರಕಾರ ಮತ್ತು ಕರ್ನಾಟಕ ಆರ್‌ಟಿಇ ಕಾಯಿದೆ ನಿಯಮ 11ರ ನಮೂನೆ-1ರಂತೆ ಸರ್ಕಾರ ಹೊರತುಪಡಿಸಿ ಇತರ ಎಲ್ಲಾ ಶಾಲೆಗಳು ಸಕ್ಷಮ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲೇಬೇಕು. ಅಲ್ಲದೇ, ಸರ್ಕಾರ 2012ರ ಏ. 28ರಂದು ಕಾಯ್ದೆಯ ಗೆಜೆಟ್ ಪ್ರಕಟಿಸಿದೆ. ಅದರಂತೆ ಕಾಯ್ದೆಯ ಸೆಕ್ಷನ್ 18 ನಿಯಮಗಳ ಅನುಸಾರ ಆರು ತಿಂಗಳಲ್ಲಿ ಶಾಲೆಯನ್ನು ನೋಂದಣಿ ಮಾಡಿ ಮಾನ್ಯತೆ ಪಡೆಯಬೇಕಿತ್ತು. ಆದರೆ ಶಾಲೆ ನಿಯಮಾನುಸಾರ ಅನುಮತಿ ಪಡೆದಿಲ್ಲ.
ಆದ್ದರಿಂದ, ನಿಯಮ ಉಲ್ಲಂಘನೆ ಮಾಡಿರುವ ಅರ್ಜಿದಾರರಿಗೆ ಇಲಾಖೆ ದಂಡ ವಿಧಿಸಿರುವ ಕ್ರಮ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಶಿಕ್ಷಣ ಇಲಾಖೆ ಅಧಿಕಾರಿಗಳು 1.61 ಕೋಟಿ ರೂ. ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
(ಮೂಲ: lawtime.in)
(WRIT PETITION NO. 24579 OF 2021 )