ಬೆಂಗಳೂರು : ಖಾತಾ ನೀಡಿರುವ
ಆಸ್ತಿಗಳನ್ನು ಮಾತ್ರ ಇಲಾಖೆಯಡಿ ನೋಂದಣಿ ಮಾಡಬೇಕು. ಸ್ಥಳೀಯ ಸಂಸ್ಥೆಗಳು ನೀಡಿರುವ ಖಾತಾ ದಾಖಲೆಗಳ ಡಾಟಾಬೇಸ್ ಕಂಪ್ಯೂಟರ್ ನಲ್ಲಿ ಇರಬೇಕು. ಈ ಡಾಟಾ ಬೇಸ್ ಆಧರಿಸಿ ನೋಂದಣಿ ಪ್ರಕ್ರಿಯೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಭೆ ನಡೆಸಿದ ಅವರು, ಬಿಬಿಎಂಪಿಯಲ್ಲಿ ಸುಮಾರು 7 ರಿಂದ 15 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿಲ್ಲ. ಇದರಿಂದ ತೆರಿಗೆಯೂ ಕಟ್ಟದ ಕಾರಣ ಸಾವಿರಾರು ಕೋಟಿ ರೂ.ಸರಕಾರಕ್ಕೆ ನಷ್ಟ ಉಂಟಾಗುತ್ತಿದೆ ಎಂದರು.
ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿಯಾನದ ಮಾದರಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ನಡೆಸಲು ಸೂಚನೆ ನೀಡಿದ ಮುಖ್ಯಮಂತ್ರಿ, ಫೆ.10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 23 ಲಕ್ಷ ಆಸ್ತಿಗಳ ಡಿಜಿಟೈಸ್ ಮಾಡಲಾಗಿದೆ. ಈಗಾಗಲೇ 15 ಲಕ್ಷ ಖಾತಾಗಳನ್ನು ಡೌನ್‌ಲೋಡ್ ಮಾಡಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕ್ರಮಬದ್ಧವಲ್ಲದ ಸ್ವತ್ತುಗಳ ನಕಲಿ ಖಾತಾಗಳನ್ನು ಸೃಜಿಸಿ ವಂಚನೆಯಿಂದ ಹೆಚ್ಚು ದಸ್ತಾವೇಜುಗಳ ನೋಂದಣಿ ಮಾಡುವ ಪ್ರಕ್ರಿಯೆಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಹೇಳಿದರು.