ಬೆಂಗಳೂರು: ಸೆಷನ್ಸ್ ನ್ಯಾಯಾಲಯದ ಆದೇಶವೊಂದರ ಪ್ರತಿಯನ್ನು ನೆಲಕ್ಕೆ ಎಸೆಯುವ ಮೂಲಕ ನ್ಯಾಯಾಲಯಕ್ಕೆ ಅಗೌರವ ತೋರಿದ್ದ ಪ್ರಕರಣದಲ್ಲಿ ಕಗ್ಗಲಿಪುರ ಠಾಣೆ ಸಬ್ ಇನ್ಸ್ ಪೆಕ್ಟರ್ ಎಚ್.ಬಿ. ಸುನೀಲ್‌ಗೆ ಹೈಕೋರ್ಟ್ ಎರಡು ಸಾವಿರ ರೂ.ದಂಡದೊಂದಿಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿದ್ದ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಪ್ರಕರಣದಲ್ಲಿ ಸುನೀಲ್ ಅವರನ್ನು ದೋಷಿ ಎಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿತು.
ಈ ವೇಳೆ ಸುನೀಲ್ ಪರ ವಕೀಲರು, ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು. ಹೀಗಾಗಿ, ಜೈಲು ಆದೇಶಕ್ಕೆ ಎರಡು ತಿಂಗಳ ಕಾಲ ತಡೆಯಾಜ್ಞೆ ನೀಡುವಂತೆ ಕೋರಿದರು.ಈ ಅರ್ಜಿ ಮಾನ್ಯ ಮಾಡಿದ ನ್ಯಾಯಪೀಠ ಸುನೀಲ್‌ಗೆ ವಿಧಿಸಿದ ಜೈಲು ಶಿಕ್ಷೆಯನ್ನು ಎರಡು ತಿಂಗಳ ಕಾಲ ಅಮಾನತ್ತಿನಲ್ಲಿರಿಸಿತು. ಇದರಿಂದ ಜೈಲು ಪಾಲಾಗುವುದರಿಂದ ಸುನೀಲ್ ಕುಮಾರ್ ಸದ್ಯ ಪಾರಾಗಿದ್ದಾರೆ.
ಏನಿದು ಪ್ರಕರಣ?: ಅಪರಾಧ ಪ್ರಕರಣದಲ್ಲಿ
ಆರೋಪಿಯೊಬ್ಬನಿಗೆ ನಾಯಾಲಯವು 2016ರಲ್ಲಿ ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ನಿರೀಕ್ಷಣಾ ಜಾಮೀನಿನ ಷರತ್ತು ಪೂರೈಸಲು ತನ್ನ ವಕೀಲ ಹಾಗೂ ಭದ್ರತಾ ಖಾತರಿ ನೀಡಲಿದ್ದ ವ್ಯಕ್ತಿಯನ್ನು ಕಗ್ಗಲಿಪುಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಆರೋಪಿ ಹಾಗೂ ಆತನ ಪರ ವಕೀಲರು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರತಿಯನ್ನು ನೀಡಿದ್ದರು. ಆದರೆ, ಠಾಣೆಯಲ್ಲಿ ಕರ್ತವ್ಯನಿರತರಾಗಿದ್ದ ಸಬ್ ಇನ್ಸ್‌ಪೆಕ್ಟರ್ ಸುನೀಲ್, ‘ಇಂತಹ ಎಷ್ಟೋ ಆದೇಶ ಪ್ರತಿಗಳನ್ನು ನಾವು ನೋಡಿದ್ದೇವೆ’ ಎಂದು ನಿರ್ಲಕ್ಷ್ಯದ ಮಾತುಗಳನ್ನಾಡಿ ಆದೇಶ ಪ್ರತಿಯನ್ನು ನೆಲಕ್ಕೆ ಎಸೆದಿದ್ದರು. ಸಂಜೆವರೆಗೂ ಕಾಯಿಸಿ ಆರೋಪಿಯ ನಿರೀಕ್ಷಣಾ ಜಾಮೀನು ಪೂರೈಸಿದ್ದರು.
ಈ ಧೋರಣೆ ವಿರುದ್ಧ ಆರೋಪಿ ಪರ ವಕೀಲರು ಸೆಷನ್ಸ್ ಕೋರ್ಟ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದ್ದರು.