ಸುದ್ದಿ

ಹೆಣ್ಣಿನ ದೇಹ ಸೌಂದರ್ಯವನ್ನು ಉದ್ದೇಶಪೂರ್ವಕವಾಗಿ ಬಣ್ಣಿಸುವುದು ಲೈಂಗಿಕ ಕಿರುಕುಳಕ್ಕೆ ಸಮ: ಹೈಕೋರ್ಟ್

Share It

ಕೇರಳ: ಹೆಣ್ಣಿನ ದೇಹವನ್ನು ಅನುಚಿತವಾಗಿ ಬಣ್ಣಿಸುವುದು ಕೂಡ ಲೈಂಗಿಕ ಕಿರುಕುಳ ಎಂದೇ ಪರಿಗಣಿಸಬೇಕು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. .

ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯೊಬ್ಬರು ತಮ್ಮ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೆಣ್ಣುಮಕ್ಕಳ ದೇಹದ ಬಗ್ಗೆ ಉದ್ದೇಶಪೂರ್ವಕವಾಗಿ, ಅನುಚಿತವಾಗಿ ಮಾತನಾಡುವುದು ಅವರ ಘನತೆಯ ಉಲ್ಲಂಘನೆಯಾಗಿದೆ. ಇದನ್ನು ಲೈಂಗಿಕ ಕಿರುಕುಳದ ಅಪರಾಧ ಎಂದೇ ಪರಿಗಣಿಸಬೇಕು. ಸ್ತ್ರೀಯರ ಬಗ್ಗೆ ಮಾತನಾಡುವಾಗ ಪುರುಷರು ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ಮಹಿಳೆಯ ಆರೋಪ: ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯ ವಿರುದ್ಧ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಗುರುತರ ಆರೋಪ ಮಾಡಿದ್ದರು. ಆತ ಕರ್ತವ್ಯದಲ್ಲಿರುವಾಗ ತನಗೆ ಕಿರುಕುಳ ನೀಡಿದ್ದಾನೆ. 2013ರಿಂದ ತನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಆಕ್ಷೇಪಾರ್ಹ ಸಂದೇಶ ಹಾಗೂ ಕರೆಗಳನ್ನು ಮಾಡುತ್ತಿದ್ದಾನೆ. ನನ್ನ ದೇಹದ ಆಕಾರದ ಬಗ್ಗೆ ಅನುಚಿತ ಹೇಳಿಕೆ ನೀಡಿದ್ದಾನೆ ಎಂದು ದೂರಿದ್ದರು. ದೂರಿನ ಮೇರೆಗೆ ಪೊಲೀಸರು ಆತನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಆರೋಪಿ, ತಾನು ಮಹಿಳೆಯನ್ನು ಸುಂದರವಾಗಿ ಇದ್ದೀಯಾ ಎಂದು ಹೊಗಳಿದ್ದೆ. ಆಕೆಯ ಮೈಮಾಟವನ್ನು ಬಣ್ಣಿಸಿದ್ದು ತಪ್ಪೇ? ಇದನ್ನು ಲೈಂಗಿಕ ಕಿರುಕುಳ ಅಪರಾಧದ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಬಾರದು. ತನ್ನ ವಿರುದ್ಧದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದ. ಆದರೆ, ನ್ಯಾಯಾಲಯ ಆರೋಪಿ ಮನವಿಯನ್ನು ನಿರಾಕರಿಸಿದ್ದು, ಹೆಣ್ಣಿನ ದೇಹ ಸೌಂದರ್ಯವನ್ನು ಉದ್ದೇಶಪೂರ್ವಕವಾಗಿ ಬಣ್ಣಿಸುವುದು ಅನುಚಿತ. ಇದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಅಭಿಪ್ರಾಯಪಟ್ಟಿದೆ.
ಮೂಲ-( Info Time)


Share It

You cannot copy content of this page