ಸುದ್ದಿ

ನೇರ ನೇಮಕಾತಿ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿ: ಕೆಪಿಟಿಸಿಎಲ್ ಗೆ ಹೈಕೋರ್ಟ್ ನೋಟಿಸ್

Share It

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ದಲ್ಲಿನ ಜೂನಿಯರ್ ಪವರ್ ಆಪರೇಟರ್ ಹಾಗೂ ಜೂನಿಯರ್ ಪವರ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬದಲು ನೇರ ನೇಮಕಾತಿ ವಿಧಾನದ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೆಪಿಟಿಸಿಎಲ್‌ಗೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತಂತೆ ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್(ರಿ) ಸಂಸ್ಥೆಯ ಅಧ್ಯಕ್ಷ ಆರ್. ಕಾಂತಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಜಿ ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

ಇದೇ ವೇಳೆ ನೇಮಕಾತಿ ಪ್ರಕ್ರಿಯೆ ಸರ್ಕಾರ ಅಥವಾ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರದ ನೀತಿ ನಿರ್ಧಾರಕ ವಿಚಾರವಾಗಿದ್ದು, ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಆದಾಗ್ಯೂ, ಕೆಪಿಟಿಸಿಎಲ್‌ಗೆ ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ನೇಮಕಾತಿಗೆ ಯಾವ ಪ್ರಕ್ರಿಯೆ ಅಥವಾ ವಿಧಾನ ಅನುಸರಿಸಲಾಗುತ್ತಿದೆ ಎಂಬ ಕುರಿತು ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಲ್ಲಿ 411 ಜೂನಿಯರ್ ಸ್ಟೇಷನ್ ಆಪರೇಟರ್ ಹಾಗೂ 2,268 ಜೂನಿಯರ್ ಪವರ್ ಮ್ಯಾನ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು 2024ರ ಅ.14ರಂದು ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ಅನುಸರಿಸಲಾಗಿದೆ.

ಕೋವಿಡ್-19 ಸಂದರ್ಭದಲ್ಲಿ ಪರೀಕ್ಷೆ ಇಲ್ಲದೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗಿದೆ. ಈ ಅವಧಿಯ ಗರಿಷ್ಠ ಅಂಕ ಗಳಿಕೆ ಸರಾಸರಿ ಹಿಂದಿನ ವರ್ಷಗಳಿಗಿಂತ ದೊಡ್ಡ ಅಂತರದಲ್ಲಿ ಹೆಚ್ಚಾಗಿದೆ.

ಕೋವಿಡ್ ಅವಧಿಯಲ್ಲಿ ಶೇ.95ರಿಂದ 100 ಅಂಕ ಗಳಿಸಿದ 1.18ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಒಂದು ವೇಳೆ, ಎಸ್ಸೆಸ್ಸೆಎಲ್ಸಿಯಲ್ಲಿನ ಗರಿಷ್ಠ ಅಂಕಗಳ ಮಾನದಂಡ ಅನುಸರಿಸಿದರೆ ಕೋವಿಡ್ ಕಾಲದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ಅದರ ಹಿಂದಿನ ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಆದ್ದರಿಂದ ಈ ವಿಧಾನ ಅನುಸರಿಸಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅಲ್ಲದೇ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವ ಅಧಿಸೂಚನೆ ರದ್ದುಪಡಿಸಬೇಕು. ನೇಮಕಾತಿ ಪ್ರಕ್ರಿಯೆ ಮರು ಪರಿಗಣಿಸುವಂತೆ ಕೆಪಿಟಿಸಿಎಲ್‌ಗೆ ನಿರ್ದೇಶನ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಸುವ ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳ ವಿದ್ಯುತ್ ನಿಗಮಗಳ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಸರ್ಕಾರ ಮತ್ತು ಕೆಪಿಟಿಸಿಎಲ್‌ಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
(ಮೂಲ-Info Time)


Share It

You cannot copy content of this page