ಸುದ್ದಿ

ಮಹಿಳೆ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ಜೈಲು ಶಿಕ್ಷೆ; ಕೆಳ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್

Share It

ಬೆಂಗಳೂರು: ಸರಕು ಸಾಗಣೆ (ಗೂಡ್ಸ್) ಆಟೋಗೆ ಪರವಾನಿಗೆ ಪಡೆಯುವುದಕ್ಕೂ ಮುನ್ನವೇ ಹಣದಾಸೆಗೆ ಪ್ರಯಾಣಿಕರನ್ನು ಕರೆದೊಯ್ದು ಮಹಿಳೆ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ವಿಧಿಸಿದ್ದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಮಂಡ್ಯದ ಪಾಂಡವಪುರ ತಾಲೂಕಿನ ಅಟ್ಟಿಗನಹಳ್ಳಿಯ ನಿವಾಸಿ ಕೃಷ್ಣ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿ.ಶ್ರೀಶಾನಂದ ಅವರಿದ್ದ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಸರಕು ಸಾಗಿಸುವ ವಾಹನದಲ್ಲಿ ಆ ಸರಕಿಗೆ ಸಂಬಂಧಿಸಿದ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಇತರರನ್ನು ಹತ್ತಿಸಿಕೊಳ್ಳುವಂತಿಲ್ಲ. ಆದರೆ, ಹಣದಾಸೆಗಾಗಿ ಚಾಲಕ ಕಾನೂನುಬಾಹಿರವಾಗಿ ಪ್ರಯಾಣಿಕರನ್ನು ಕರೆದೊಯ್ದಿದ್ದಾನೆ. ಹೀಗಾಗಿ ಶಿಕ್ಷೆಗೆ ಅರ್ಹನಾಗಿದ್ದಾನೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಆರೋಪಿ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾನೆ. ಆದರೆ, ಅದಕ್ಕೆ ವಿವರಣೆ ನೀಡಿಲ್ಲ. ಆರೋಪಿ ತನ್ನ ವಿರುದ್ಧದ ಸಾಕ್ಷ್ಯಗಳನ್ನು ನಿರಾಕರಿಸಿದ ಕಾರಣಕ್ಕೆ ಆತನನ್ನು ನಿರಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಪಘಾತಕ್ಕೆ ಕಾರಣವಾದ ವಾಹನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ. ಘಟನೆ ನಡೆದ ರಸ್ತೆಯೂ ನೇರವಾಗಿದ್ದು, ಯಾವುದೇ ಹಳ್ಳಗಳಿರಲಿಲ್ಲ. ಘಟನೆಗೆ ಮತ್ತೊಂದು ವಾಹನವೂ ಕಾರಣವಾಗಿಲ್ಲ. ಹೀಗಿದ್ದರೂ ಚಾಲಕನ ನಿಯಂತ್ರಣ ತಪ್ಪಿದೆ. ಅತಿವೇಗವಾಗಿ ಹೋಗಿಲ್ಲದಿದ್ದರೆ ಆಟೋ ಸ್ವಯಂಪ್ರೇರಿತವಾಗಿ ಪಲ್ಟಿ ಹೊಡೆಯಲು ಸಾಧ್ಯವೇ ಎಂದು ಪ್ರಶ್ನಿಸಿರುವ ಪೀಠ, ಶಿಕ್ಷೆ ರದ್ದು ಕೋರಿದ್ದ ಆರೋಪಿಯ ಮನವಿಯನ್ನು ಪರಿಗಣಿಸಲು ನಿರಾಕರಿಸಿದೆ.

ಬಸ್ ಸೌಲಭ್ಯವಿಲ್ಲ ಎಂಬ ಕಾರಣ ನೀಡಿ ಆಟೋ ಚಾಲಕರು ಎಲ್ಲ ಪ್ರಯಾಣಿಕರನ್ನು ತುಂಬಿಕೊಂಡು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಾರೆಂದು ಸಾಕ್ಷಿಗಳು ವಿವರಿಸಿದ್ದಾರೆ. ಜನರನ್ನು ಗೂಡ್ಸ್ ಆಟೋ ರಿಕ್ಷಾದಲ್ಲಿ ಕರೆದೊಯ್ಯುವಾಗ ರಸ್ತೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿ, ಉಳಿದವರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಪ್ರಜ್ಞೆ ತಪ್ಪಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ಘಟನೆ ಕುರಿತಂತೆ ವಿವರಿಸಿದ್ದಾರೆ. ಆಟೋ ಚಾಲಕರ ಅತಿ ವೇಗ, ನಿರ್ಲಕ್ಷ್ಯ ಮತ್ತು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿರುವುದು ಸರಿಯಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯದ ಕೆಆರ್‌ಎಸ್‌ನಿಂದ ಕೆ.ನಾಗನಹಳ್ಳಿ ಕಡೆ ಪ್ರಯಾಣಿಸುತ್ತಿದ್ದ ಗೂಡ್ಸ್ ಆಟೋ ಅಪಘಾತಕ್ಕೀಡಾಗಿತ್ತು. ಈ ವೇಳೆ ನಾಗಮ್ಮ ಎಂಬುವರು ತೀವ್ರ ಗಾಯಗೊಂಡು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇತರರಿಗೆ ಗಾಯಗಳಾಗಿ ಬದುಕಿ ಉಳಿದದ್ದರು. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಟೋ ಚಾಲಕ ಕೃಷ್ಣ ವಿರುದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 2500 ರೂ. ದಂಡ ವಿಧಿಸಿತ್ತು.

ಆರೋಪಿ ಕೃಷ್ಣ ಇದನ್ನು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮ್ಯಾಜಿಸ್ಟ್ರೆಟ್ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಎತ್ತಿ ಹಿಡಿದು ಅರ್ಜಿ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಕ್ರಿಮಿನಲ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
(ಮೂಲ- Info Time)


Share It

You cannot copy content of this page