ಸುದ್ದಿ

ಕಳಪೆ ರಸ್ತೆಯಿಂದಾಗುವ ಅಪಘಾತಕ್ಕೆ ಗುತ್ತಿಗೆದಾರ, ಇಂಜಿನಿಯರ್ ಹೊಣೆಯಾಗಿಸಿ ಜೈಲಿಗಟ್ಟಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ

Share It

ನವದೆಹಲಿ: ಜಾಗತಿಕವಾಗಿ ರಸ್ತೆ ಅಪಘಾತಗಳಲ್ಲಿ ಭಾರತ ನಂ1 ಸ್ಥಾನದಲ್ಲಿದ್ದು ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ  ಕಳವಳ ವ್ಯಕ್ತಪಡಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ ನೀಡಿದ್ದು ಕಳಪೆ ರಸ್ತೆ ಕಾಮಗಾರಿಗಳಿಂದಾಗುವ ಅಪಘಾತಗಳಿಗೆ ಸಂಬಂಧಪಟ್ಟ ಗುತ್ತಿಗೆದಾರರು, ಎಂಜಿನಿಯರ್ ಗಳನ್ನು ಹೊಣೆಗಾರರನ್ನಾಗಿಸಿ ಜೈಲಿಗಟ್ಟಬೇಕು ಎಂದು ಹೇಳಿದ್ದಾರೆ.

ಗುರುವಾರ ಸಿಐಐ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳಪೆ ಅಥವಾ ದೋಷಪೂರ್ಣ ರಸ್ತೆ ನಿರ್ಮಾಣವನ್ನು ಜಾಮೀನುರಹಿತ ಅಪರಾಧವಾಗಿ ಪರಿಗಣಿಸಬೇಕು ಮತ್ತು ಇಂಥ ರಸ್ತೆಗಳನ್ನು ನಿರ್ಮಿಸಿದ ರಸ್ತೆ ಗುತ್ತಿಗೆದಾರರು, ಇಂಜಿನಿಯರ್‌ರನ್ನು ರಸ್ತೆ ಅಪಘಾತಕ್ಕೆ ಹೊಣೆಗಾರರನ್ನಾಗಿಸಿ, ಕಳಪೆ ಕಾಮಗಾರಿ ಮಾಡಿದವರಿಗೆ ಜೈಲು ಶಿಕ್ಷೆಯಾಗಬೇಕು ಎಂದರು.

ಜಾಗತಿಕವಾಗಿ ನೋಡಿದರೆ ರಸ್ತೆ ಅಪಘಾತಗಳಲ್ಲಿ ಭಾರತ ನಂ. 1 ಸ್ಥಾನದಲ್ಲಿದೆ. ಇದು ನೋವಿನ ವಿಷಯ. ರಸ್ತೆ ಅಪಘಾತಗಳಲ್ಲಿ ಸಂಭವಿಸುತ್ತಿರುವ ಸಾವಿನ ಪ್ರಮಾಣವನ್ನು 2030ರ ಹೊತ್ತಿಗೆ ಅರ್ಧಕ್ಕೆ ತಗ್ಗಿಸುವ ಗುರಿ ಹೊಂದಲಾಗಿದೆ. ರಸ್ತೆ ಹೆದ್ದಾರಿ ಸಚಿವಾಲಯದ ಪ್ರಕಾರ 2023ರಲ್ಲಿ ದೇಶದಲ್ಲಿ 5 ಲಕ್ಷ ಅಪಘಾತಗಳು ಸಂಭವಿಸಿವೆ. ಇದರಲ್ಲಿ 1.72 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದ ಗಡ್ಕರಿ ಇವರ ಪೈಕಿ ಶೇಕಡ 66.4% ಅಂದರೆ 1.14 ಲಕ್ಷ ಜನರು 18-45 ವರ್ಷದೊಳಗಿನವರಾಗಿದ್ದರು ಮತ್ತು 10 ಸಾವಿರ ಮಕ್ಕಳಿದ್ದರು ಎಂದು ವಿವರಿಸಿದರು.

ಹೆಲೈಟ್ ಹಾಕದೆ ಇರುವುದರಿಂದ 55 ಸಾವಿರ ಸಾವುಗಳು ಸಂಭವಿಸಿವೆ. ಸೀಟ್ ಬೆಲ್ಟ್ ಧರಿಸದ್ದರಿಂದ 30 ಸಾವಿರ ಜನರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ಹೆದ್ದಾರಿಗಳಲ್ಲಿ ಅಪಘಾತ ವಲಯಗಳನ್ನು ಗುರುತಿಸಲು ಮತ್ತು ಅವುಗಳನ್ನು ಸರಿಪಡಿಸಲು ನಮ್ಮ ಸಚಿವಾಲಯ 40 ಸಾವಿರ ಕೋಟಿ ರೂ. ಗಳನ್ನು ವೆಚ್ಚ ಮಾಡುತ್ತಿದೆ ಎಂದರು.


Share It

You cannot copy content of this page