ಶಹಾಪುರ: ಮಟಕಾ ದಂಧೆ ನಡೆಸುತ್ತಿದ್ದ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಠಾಣೆಗೆ ಕರೆತಂದು ಥಳಿಸಿದ್ದ ಆರೋಪದ ಮೇಲೆ ಪಿಎಸ್‌ಐ ಹಾಗೂ ಮೂವರು ಪೇದೆಗಳ ವಿರುದ್ಧ ಇದೀಗ ಎಫ್ ಐಆರ್ ದಾಖಲಾಗಿದೆ. ಶಹಾಪುರ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಡಿ. ವೆಂಕಟೇಶ ನಾಯಕ, ಪೇದೆಗಳಾದ ಗಣೇಶ, ಸಿದ್ರಾಮರಡ್ಡಿ, ಮಾನಯ್ಯ ವಿರುದ್ಧ ಶನಿವಾರ ಕೇಸ್ ದಾಖಲಿಸಲಾಗಿದೆ.
ನಗರದ ಅಬ್ದುಲ್ ರಹೀಂ ಎಂಬುವರು ನಗರದ ಜೆಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರಾಗಿ ಸೆ.6 ರಂದು ಖಾಸಗಿ ದೂರು ಸಲ್ಲಿಸಿ ಹಲ್ಲೆ ಮಾಡಿದ ಬಗ್ಗೆ ತಿಳಿಸಿದ್ದರು. ನ್ಯಾಯಾಲಯದಲ್ಲಿ ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡು ಠಾಣಾ ಅಧಿಕಾರಿಗೆ ದೂರು ಸಲ್ಲಿಸುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದರು. ಈ ಹಿನ್ನೆಲೆ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಫಿರ್ಯಾದಿದಾರ ಪರ ವಕೀಲ ಮಹ್ಮದ್ ಗೌಸ್ ಗೋಗಿ ತಿಳಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.