ಸುದ್ದಿ

ಕೊಲೆ ಪ್ರಕರಣ: ಅಪರಾಧಿ ಮಹಿಳೆಗೆ ಮರಣ ದಂಡನೆ ಶಿಕ್ಷೆ ವಿಧಿಸಿದ ಕೋಟ್೯

Share It

ತಿರುವನಂತಪುರ: ಪ್ರಿಯಕರನನ್ನು ಕೊಂದಿದ್ದ ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ ಕೇರಳ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಮಹಿಳೆಯ ಜೊತೆಗೆ ಆಕೆಯ ಚಿಕ್ಕಪ್ಪ, ಪ್ರಕರಣದ ಮೂರನೇ ಆರೋಪಿ ನಿರ್ಮಲಕುಮರನ್ ನಾಯರ್ ಅವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ನೆಯ್ಯತ್ತಿಂಕರದ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

ನಮ್ಮ ಕುಟುಂಬಕ್ಕೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ನಮ್ಮ ಪೋಷಕರಿಗೆ ಒಬ್ಬಳೇ ಮಗಳಾಗಿರುವೆ ಹಾಗೂ ನನ್ನ ಶೈಕ್ಷಣಿಕ ಸಾಧನೆಗಳನ್ನು ಪರಿಗಣಿಸಿ ಶಿಕ್ಷೆ ಪ್ರಮಾಣದಲ್ಲಿ ವಿನಾಯಿತಿ ನೀಡುವಂತೆ ಹತ್ಯೆ ಪ್ರಕರಣದ ಅಪರಾಧಿ ಗ್ರೀಷ್ಮಾ(24) ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ, ನಡೆದಿರುವ ಅಪರಾಧದಲ್ಲಿ ಶಿಕ್ಷೆ ನೀಡುವಾಗ ಅಪರಾಧಿಯ ವಯಸ್ಸು ಮತ್ತು ಇನ್ನಿತರ ಯಾವುದೇ ಅಂಶಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.

ಹತ್ಯೆಗೀಡಾದ ಶರಾನ್ ರಾಜ್, ತಿರುವನಂತಪುರ ಜಿಲ್ಲೆಯ ಪರಶಾಲಾ ನಿವಾಸಿಯಾಗಿದ್ದರು.
ತೀರ್ಪಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಹತ್ಯೆಗೀಡಾದ ಶರಾನ್ ತಾಯಿ ಪ್ರಿಯಾ, ಇಂತಹ ಅನುಕರಣೀಯ ತೀರ್ಪು ಪ್ರಕಟಿಸಿದ ನ್ಯಾಯಾಲಯಕ್ಕೆ ನಾನು ಕೃತಜ್ಞಳಾಗಿದ್ದೇನೆ ಎಂದು ತಿಳಿಸಿದ್ದಾರೆ.

ತೀರ್ಪಿನ ಕುರಿತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಎಸ್.ವಿನೀತ್ ಕುಮಾರ್, ಈ ಪ್ರಕರಣವು ಅಪರೂಪದ ಪ್ರಕರಣಗಳ ಅಡಿಯಲ್ಲಿ ಬರುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ. ಅಪರಾಧಿ ಮಹಿಳೆಯು ಕ್ರಿಮಿನಲ್ ಆಗಿದ್ದು, ಬಹಳ ದೊಡ್ಡ ಪ್ಲಾನ್ ಮಾಡಿ ಕ್ರೂರವಾಗಿ ಹತ್ಯೆ ಮಾಡಿದ್ದಳು ಎಂದಿದ್ದಾರೆ.

ಗ್ರೀಷ್ಮಾಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ, ಶರಾನ್ ರಾಜ್ ತಮ್ಮ ಸಂಬಂಧ ಕಡಿದುಕೊಳ್ಳಲು ನಿರಾಕರಿಸಿದಾಗ ಗ್ರೀಷ್ಮಾ ಈ ಕೃತ್ಯ ಎಸಗಿದ್ದಾಳೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.

2022ರ ಅಕ್ಟೋಬರ್ 14ರಂದು ಪ್ರಿಯಕರ ಶರಾನ್ ರಾಜ್ ಅವರನ್ನು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಾಂಚಿರೈನಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದ ಅಪರಾಧಿ ಗ್ರೀಷ್ಮಾ.ಆಯುರ್ವೇದ ಔಷಧಿಯಲ್ಲಿ ವಿಷ ಬೆರೆಸಿ ಕುಡಿಸಿದ್ದಳು. ಬಳಿಕ, ಶರಾನ್‌ ರಾಜ್ ಗೆ ಬಹುಅಂಗಾಂಗ ವೈಫಲ್ಯ ವೈಫಲ್ಯದಿಂದ ಅಕ್ಟೋಬರ್ 25ರಂದು ಮೃತಪಟ್ಟಿದ್ದರು.


Share It

You cannot copy content of this page