ಸುದ್ದಿ

ಲಂಚ ಪ್ರಕರಣ ಸಾಬೀತಾದರೆ ಸೇವೆಯಿಂದ ವಜಾಗೊಳಿಸುವುದೇ ಸರಿಯಾದ ಶಿಕ್ಷೆ; ರಾಜ್ಯ ಸರ್ಕಾರದ ಅರ್ಜಿಯನ್ನು ಮಾನ್ಯಮಾಡಿದ ಹೈಕೋರ್ಟ್

Share It

ಬೆಂಗಳೂರು: ಸರ್ಕಾರಿ ಉದ್ಯೋಗಿ ಲಂಚ ಪಡೆದಿರುವುದು ಸಾಬೀತಾದರೆ ಆತನನ್ನು ಸೇವೆಯಿಂದಲೇ ವಜಾಗೊಳಿಸುವುದೇ ಸರಿಯಾದ ಶಿಕ್ಷೆ ಎಂದು ಹೇಳಿರುವ ಹೈಕೋರ್ಟ್  ಲಂಚ ಪಡೆದ ಪ್ರಕರಣದಲ್ಲಿ ಬ್ಲಾಕ್ ಶಿಕ್ಷಣಾಧಿಕಾರಿಯನ್ನು ವಜಾಗೊಳಿಸಿದ್ದನ್ನು ಕಡ್ಡಾಯ ನಿವೃತ್ತಿಗೆ ಮಾರ್ಪಡಿಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ.

ಕೆಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಹಾಗೂ ಡಿ.ರಾಮಚಂದ್ರ ಹುದ್ದಾರ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.

ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಆದೇಶ ಮಾರ್ಪಡಿಸುವುದಕ್ಕೆ ಸಮರ್ಥನೆ ನೀಡಿಲ್ಲ. ಕಾನೂನಿನ ನೆಲೆಯಲ್ಲಿ ಕ್ರಿಮಿನಲ್ ಪ್ರಕ್ರಿಯೆ ಹಾಗೂ ಇಲಾಖಾ ವಿಚಾರಣೆ ವಿಭಿನ್ನ, ಕ್ರಿಮಿನಲ್ ಮೊಕದ್ದಮೆಗಳಲ್ಲಿ ಕಟ್ಟುನಿಟ್ಟಾಗಿ ಸಾಕ್ಷ್ಯ ಸಂಗ್ರಹ ಮಾಡಬೇಕಿರುವ ಅಗತ್ಯತೆ ಇದೆ. ಆದರೆ, ಇಲಾಖಾ ಪ್ರಕ್ರಿಯೆಗಳಲ್ಲಿ ಪ್ರಾಧಾನ್ಯತೆ  ಆಧಾರದ ಮೇಲೆ ಆರೋಪ ಸಾಬೀತುಪಡಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.

ಅರ್ಜಿದಾರರು ಹೇಳಿರುವಂತೆ ಮೂವರು ಪ್ರತ್ಯಕ್ಷದರ್ಶಿಗಳ ಹೇಳಿಕೆಯೂ ಆರೋಪವನ್ನು ಸ್ಪಷ್ಟಪಡಿಸುತ್ತದೆ. ಆದರೆ ದೂರುದಾರರು ಹೇಳಿರುವಂತೆ ಒತ್ತಾಯಪೂರ್ವಕವಾಗಿ ತಮಗೆ ಹಣ ನೀಡಲಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲು ನಿರ್ದಿಷ್ಟ ಪುರಾವೆಗಳಿಲ್ಲ. ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೇಳಿರುವಂತೆ ಲಂಚದ ಮೊತ್ತದ ದುಷ್ಕೃತ್ಯ ಸಾಬೀತಾದರೆ, ವಜಾಗೊಳಿಸುವುದು ಅಥವಾ ತೆಗೆದುಹಾಕುವುದು ಮಾತ್ರ ಶಿಕ್ಷೆಯಾಗಿದೆ.

ಲಂಚಕ್ಕೆ ಬೇಡಿಕೆ ಮತ್ತು ಸ್ವೀಕರಿಸಿದ ಆರೋಪ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ತೀರ್ಮಾನಕ್ಕೆ ಬರದ ಹೊರತು, ಶಿಸ್ತು ಪ್ರಾಧಿಕಾರವು ವಿಧಿಸಿದ ಶಿಕ್ಷೆ ಮಾರ್ಪಡಿಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ ಕೆಎಟಿ ಆದೇಶ ಬದಿಗಿರಿಸಿ ಅರ್ಜಿ ಪುರಸ್ಕರಿಸಿ ಆದೇಶಿಸಿದೆ.

ಏನಿದು ಪ್ರಕರಣ?: 2010 ಏ.29ರಂದು ವಿದ್ಯಾರ್ಥಿನಿಯೊಬ್ಬಳು  ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿನ ಲೋಪದೋಷ ಸರಿಪಡಿಸಬೇಕೆಂದು ಕೇಳಿದ್ದಳು.  ಆಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಶಿಕ್ಷಣ ಇಲಾಖೆಯಡಿ ದ್ವಿತೀಯ ದರ್ಜೆ ಸಹಾಯಕರಾಗಿ (ಬ್ಲಾಕ್ ಶಿಕ್ಷಣಾಧಿಕಾರಿಯಾಗಿ) ಕಾರ್ಯನಿರ್ವಹಿಸುತ್ತಿದ್ದ ಎ.ಎಸ್.ಪ್ರಭು ಎಂಬುವರು 25 ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದರು ಎಂದು ವಿದ್ಯಾರ್ಥಿನಿಯ ತಂದೆ ದೂರು ನೀಡಿದ್ದು, ದೂರಿನ ಅನ್ವಯ ಪ್ರತಿವಾದಿಯು 20 ಸಾವಿರ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದರು. ತದನಂತರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರು ದಾಖಲಿಸಲಾಗಿದ್ದು, ಇಲಾಖಾ ವಿಚಾರಣೆ ಪ್ರಾರಂಭಿಸಲಾಯಿತು. ತದನಂತರ ಆರೋಪ ನಿಗದಿಪಡಿಸಿದ್ದು ಶಿಸ್ತು ಪ್ರಾಧಿಕಾರ ಹುದ್ದೆಯಿಂದ ಆರೋಪಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪ್ರತಿವಾದಿ ಮೇಲ್ಮನವಿ ಸಲ್ಲಿಸಿದ್ದು ಕೆಎಟಿ ಕಡ್ಡಾಯ ನಿವೃತ್ತಿಗೆ ಮಾರ್ಪಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.


Share It

You cannot copy content of this page