ಬೆಂಗಳೂರು: ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ವಿಚಾರಣೆಗೆ ಹಾಜರಾಗಲು ಮತ್ತೊಂದು ಊರಿಗೆ ಹೋಗಲು ಪತ್ನಿಗೆ ತೊಂದರೆಯಾಗುತ್ತದೆ ಎಂದರೆ, ಇಬ್ಬರು ಅಪ್ರಾಪ್ತ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಪತಿಗೆ ಮತ್ತೆಷ್ಟು ತೊಂದರೆಯಾಗಬಹುದು ಎಂದು ಪ್ರಶ್ನಿಸಿರುವ ಹೈಕೋರ್ಟ್ ಪ್ರಕರಣವನ್ನು ವರ್ಗಾವಣೆ ಮಾಡುವಂತೆ ಪತ್ನಿ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ಹಿರಿಯ ಸಿವಿಲ್ ನ್ಯಾಯಾಲಯದ ಮುಂದೆ ನಡೆಯುತ್ತಿದೆ. ಈ ನ್ಯಾಯಾಲಯ ಶಿವಮೊಗ್ಗದ ಹೊಸನಗರದಲ್ಲಿರುವ ತನ್ನ ಮನೆಯಿಂದ 130 ಕಿ.ಮೀ ದೂರದಲ್ಲಿದೆ. ನರಸಿಂಹರಾಜಪುರದ ನ್ಯಾಯಾಲಯದ ವಿಚಾರಣೆಗೆ ಹೋಗಿಬರಲು ಕಷ್ಟವಾಗುತ್ತದೆ. ಹೀಗಾಗಿ, ಶಿವಮೊಗ್ಗದ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡಬೇಕು ಎಂದು ಕೋರಿ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಡಾ. ಚೆಲ್ಲಾಕುರ್ ಸುಮಲತಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಚಿಕ್ಕಮಗಳೂರಿಗೆ ತೆರಳಲು ತನಗೆ ಸಮಸ್ಯೆಯಾಗುತ್ತದೆ ಎಂದು ಅರ್ಜಿದಾರೆ ಹೇಳುತ್ತಿದ್ದಾರೆ. ಆದರೆ, ಪ್ರಕರಣದ ವಿಚಾರಣೆಯನ್ನು ಶಿವಮೊಗ್ಗಕ್ಕೆ ವರ್ಗಾಯಿಸಿದರೆ, ಇಬ್ಬರು ಅಪ್ರಾಪ್ತ ಮಕ್ಕಳನ್ನು (ಅರ್ಜಿದಾರ ಪತ್ನಿ ಜೊತೆಗಿನ ವಿವಾಹ ಸಂಬಂಧದಿಂದ ಜನಿಸಿರುವ) ನೋಡಿಕೊಳ್ಳುತ್ತಿರುವ ಪತಿಗೆ ಮತ್ತಷ್ಟು ತೊಂದರೆಯಾಗಲಿದೆ ಎಂದು ಪೀಠ ಹೇಳಿದೆ.
ಅಲ್ಲದೇ, ಸಾಂವಿಧಾನಿಕವಾಗಿ ಪುರುಷರಷ್ಟೇ ಸಮಾನ ಹಕ್ಕುಗಳು ಮಹಿಳೆಯರಿಗೆ ಇವೆ. ಆದರೆ ವಾಸ್ತವವಾಗಿ ಪತಿ-ಪತ್ನಿ ನಡುವಿನ ವ್ಯಾಜ್ಯದಲ್ಲಿ ಪತ್ನಿಯಲ್ಲದೆ ಪತಿಯೂ ಹಾನಿಗೊಳಗಾಗುತ್ತಾರೆ. ಹಾಗಾಗಿ, ಸದ್ಯ ಲಿಂಗ ತಾರತಮ್ಯವಿಲ್ಲದ ಸಮಾಜದ ಅಗತ್ಯ ತುರ್ತಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ವಿಚಾರಣೆ ವೇಳೆ ಪತಿಯ ಪರ ವಕೀಲರು ವಾದಿಸಿ, ಅರ್ಜಿದಾರೆಯ ಜೊತೆಗಿನ ವಿವಾಹದಿಂದ ಜನಿಸಿರುವ ಏಳು ಮತ್ತು ಒಂಬತ್ತು ವರ್ಷದ ಎರಡು ಮಕ್ಕಳನ್ನು ಪತಿ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಊಟ ತಯಾರಿಸಿ ಉಣಬಡಿಸುವುದು, ಶಾಲೆಗೆ ಕಳುಹಿಸುವುದು ಸೇರಿ ಇತ್ಯಾದಿ ಕೆಲಸಗಳನ್ನು ಪತಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಪ್ರಕರಣದ ವಿಚಾರಣೆಯನ್ನು ಶಿವಮೊಗ್ಗಕ್ಕೆ ವರ್ಗಾಯಿಸಿದರೆ ಅಲ್ಲಿಗೆ ತೆರಳಲು ಅವರು ಸಾಕಷ್ಟು ಓಡಾಟ ಮಾಡಬೇಕಾಗುತ್ತದೆ. ಇದು ಸಾಕಷ್ಟು ಸಮಸ್ಯೆ ಉಂಟು ಮಾಡಲಿದೆ ಎಂದು ವಿವರಿಸಿದರು. ಪತಿ ಪರ ವಾದ ಪರಿಗಣಿಸಿದ ನ್ಯಾಯಪೀಠ, ಮಹಿಳೆಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.