ಕುಡಿದ ಅಮಲಿನಲ್ಲಿ ತುರ್ತು ಪೊಲೀಸ್ ಸಹಾಯವಾಣಿ ‘ಡಯಲ್-100’ಗೆ ಕರೆ ಮಾಡಿ ಕಾಟ ನೀಡಿದ್ದ ವ್ಯಕ್ತಿಗೆ ನ್ಯಾಯಾಲಯ 4 ದಿನ ಜೈಲು ಶಿಕ್ಷೆ ವಿಧಿಸಿದೆ.
ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಪುಲಿ ಸಚಿನ್ (37) ಎಂಬಾತ ಮದ್ಯದ ಅಮಲಿನಲ್ಲಿ ರಾತ್ರಿ 10:30 ರಿಂದ ನಡುರಾತ್ರಿ 1 ಗಂಟೆಯವರೆಗೆ ಡಯಲ್-100 ಗೆ 7 ಬಾರಿ ಕರೆ ಮಾಡಿದ್ದ. ಪ್ರತಿ ಬಾರಿ ಕರೆ ಮಾಡಿದಾಗಲೂ ಆರೋಪಿ ತನ್ನ ವಿವರಗಳನ್ನು ನೀಡದೆ ಪೊಲೀಸರಿಗೆ ಕಿರಿಕಿರಿ ಉಂಟು ಮಾಡಿದ್ದ. ರಾತ್ರಿ ಹೊತ್ತಲ್ಲಿ ನಿರಂತರವಾಗಿ ಕರೆ ಮಾಡಿ ಕಿರಿಕುಳ ನೀಡಿದ ವ್ಯಕ್ತಿಯ ಬಗ್ಗೆ ಸಹಾಯವಾಣಿ ಸಿಬ್ಬಂದಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕರೆ ಬಂದ ಫೋನ್ ಸಂಖ್ಯೆ ಆಧಾರದ ಮೇಲೆ ಸ್ಥಳ ಪತ್ತೆ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಘಟನೆ ಕುರಿತಂತೆ ವಿಚಾರಣೆ ಮಾಡಿದಾಗ ಆತ, ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದಾಗಿ ತಿಳಿಸಿದ್ದ. ತುರ್ತು ಅಗತ್ಯಗಳಿಗೆ ಸ್ಪಂದಿಸಲು ಇರುವ ಸಹಾಯವಾಣಿಗೆ ಬೇಕಾಬಿಟ್ಟಿ ಕರೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ಇದೀಗ 4 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಧೀಶ ಜಿ.ಗಂಗಾರೆಡ್ಡಿ ಆರೋಪಿಗೆ ಶಿಕ್ಷೆ ವಿಧಿಸುವ ವೇಳೆ, ತುರ್ತು ಸಂದರ್ಭಗಳಲ್ಲಿ ಜನರಿಗೆ ಉಪಯುಕ್ತವಾಗಿರುವ ಡಯಲ್-100 ಅನ್ನು ಅಗತ್ಯವಿದ್ದಾಗ ಮಾತ್ರ ಬಳಸಬೇಕು. ಯಾರಾದರೂ ದುರುಪಯೋಗ ಮಾಡಿಕೊಂಡರೆ ಇಂತಹುದೇ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಪತ್ತಿನಲ್ಲಿರುವವರಿಗೆ ತಕ್ಷಣಕ್ಕೆ ಸಹಾಯಕ್ಕೆ ಬರಲು ‘ಡಯಲ್-100’ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದ್ದು, ದಿನದಿಂದ ದಿನಕ್ಕೆ ನಕಲಿ ಕರೆಗಳು ಹೆಚ್ಚುತ್ತಿವೆ. ಜತೆಗೆ ಕಿಡಿಗೇಡಿಗಳು ಅನಗತ್ಯ ಕರೆ ಮಾಡುವ ಮೂಲಕ ಪೊಲೀಸರ ಸಮಯ ಮತ್ತು ಶ್ರಮ ವ್ಯರ್ಥ ಮಾಡುತ್ತಿದ್ದಾರೆ. ಕೆಲವೊಮ್ಮೆ ಬಂದ ಕರೆಗಳ ಜಾಡು ಹಿಡಿದು ಆ ಪ್ರದೇಶಕ್ಕೆ ಪೊಲೀಸರು ತೆರಳಿದರೆ, ಅಲ್ಲಿ ದೂರಿನಲ್ಲಿ ಹೇಳಿದಂತೆ ಯಾವುದೇ ಘಟನೆ ನಡೆದಿರುವುದಿಲ್ಲ ಎಂದು ಪೊಲೀಸರು ನ್ಯಾಯಾಲಯದ ಮುಂದೆ ಅಳಲು ಹೇಳಿಕೊಂಡಿದ್ದಾರೆ.