ಬೆಂಗಳೂರು: ತಾನು ಹೊಂದಿದ್ದ ಪಿಸ್ತೂಲ್ ಲೈಸೆನ್ಸ್ ರದ್ದು ಮಾಡಿ ಅದನ್ನು ಮಟ್ಟುಗೋಲು ಹಾಕಿಕೊಂಡಿರುವ ಪೊಲೀಸರ ಕ್ರಮ ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತನಗೆ ಈ ಹಿಂದೆ ಮಂಜೂರು ಮಾಡಲಾಗಿದ್ದ ಪಿಸ್ತೂಲ್ ಪರವಾನಗಿ ಅಮಾನುತುಪಡಿಸಿ ಉಪ ಪೊಲೀಸ್ ಆಯುಕ್ತರು (ಆಡಳಿತ) ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ದರ್ಶನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಗೆ ನಿಗದಿಯಾಗಬೇಕಿದೆ.
ಸಮಾಜದಲ್ಲಿ ತಾನು ಹೊಂದಿರುವ ಸ್ಥಾನಮಾನ ಪರಿಗಣಿಸಿ ನನಗೆ ಈ ಹಿಂದೆ ಪಿಸ್ತೂಲ್ ಹೊಂದಲು ಪೊಲೀಸ್ ಇಲಾಖೆ ಪರವಾನಿಗೆ ನೀಡಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ನಾನು ಪಿಸ್ತೂಲ್ ದುರುಪಯೋಗ ಮಾಡುವ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿ, ಲೈಸೆನ್ಸ್ ಏಕೆ ರದ್ದುಪಡಿಸಬಾರದು? ಎಂದು ವಿವರಣೆ ಕೇಳಿ 2025ರ ಜ.7ರಂದು ನೋಟಿಸ್ ನೀಡಿದ್ದರು.
ಶೋಕಾಸ್ ನೋಟಿಸ್ ಗೆ ತಾನು ಜನವರಿ 13ರಂದು ಉತ್ತರಿಸಿ, ಪಿಸ್ತೂಲ್ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ನಿರಾಕರಿಸಿದ್ದೆ. ಜತೆಗೆ, ನಾನು ಪ್ರಕರಣದಲ್ಲಿ ಅಮಾಯಕನಾಗಿದ್ದೇನೆ. ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ. ಹೀಗಾಗಿ ಪ್ರಕರಣದ ಸಾಕ್ಷಿಗಳನ್ನು ಬೆದರಿಸುವ ಅವಶ್ಯಕತೆಯೂ ಇಲ್ಲ. ಆದ್ದರಿಂದ, ಶೋಕ್‌ಸ್ ನೋಟಿಸ್ ಹಿಂಪಡೆಯಬೇಕು ಎಂದು ಮನವಿ ಮಾಡಿದ್ದೆ. ಮತ್ತೊಂದು ಪತ್ರ ಬರೆದು, ಪಿಸ್ತೂಲ್ ದುರುಪಯೋಗ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದೆ.
ನನ್ನ ಮನವಿಯ ಹೊರತಾಗಿಯೂ ಅಪರಾಧ ಪ್ರಕರಣ ಬಾಕಿಯಿರುವ ಕಾರಣ ನೀಡಿ ಪಿಸ್ತೂಲ್ ಪರವಾನಿಗೆ ಅಮಾನತುಪಡಿಸಿ ಉಪ ಪೊಲೀಸ್ ಆಯುಕ್ತರು 2025ರ ಜ.16ರಂದು ಆದೇಶಿಸಿದ್ದಾರೆ. ಜನವರಿ 20ರಂದು ಪಿಸ್ತೂಲ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪೊಲೀಸರ ಕ್ರಮ ಸಂಪೂರ್ಣ ಏಪಕ್ಷೀಯ ಮತ್ತು ಕಾನೂನು ಬಾಹಿರ ಕ್ರಮವಾಗಿದೆ. ಕೇವಲ ನನಗೆ ಕಿರುಕುಳ ನೀಡುವ ಉದ್ದೇಶದಿಂದ ಈ ಆದೇಶ ಮಾಡಲಾಗಿದೆ. ಎಲ್ಲ ಕಾನೂನು ಪ್ರಕ್ರಿಯೆ ಪಾಲಿಸಿದ ನಂತರವೇ ಈ ಹಿಂದೆ ನನಗೆ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿತ್ತು. ಆದ್ದರಿಂದ ಉಪ ಪೊಲೀಸ್ ಆಯುಕ್ತರ ಆದೇಶ ರದ್ದುಪಡಿಸಬೇಕು ಎಂದು ದರ್ಶನ್ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.