ಬೆಂಗಳೂರು: ಮೈಸೂರು ನಗರಾಭಿವೃದ್ಧಿ
ಪ್ರಾಧಿಕಾರದಿಂದ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಈ ಆದೇಶದಿಂದ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟದಲ್ಲಿ ಸ್ವಲ್ಪ ನಿರಾಳರಾದಂತಾಗಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆಯನ್ನು 2025ರ ಜನವರಿ 27ರಂದು ಪೂರ್ಣಗೊಳಿಸಿ, ಕಾಯ್ದಿರಿಸಿರುವ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಶುಕ್ರವಾರ ಪ್ರಕಟಿಸಿತು.
ಲೋಕಾಯುಕ್ತ ಸಂಸ್ಥೆ ಈವರೆಗೂ ನಡೆದಿರುವ ತನಿಖಾ ವರದಿಯನ್ನು ಪರಿಶೀಲಿಸಿದರೆ ಪಕ್ಷಪಾತದಿಂದ ತನಿಖೆ ನಡೆಸಿದೆ ಮತ್ತು ಕಳಪೆಯಿಂದ ಕೂಡಿದೆ ಎಂದು ತೋರುವುದಿಲ್ಲ. ಹೀಗಾಗಿ ಪ್ರಕರಣದ ಮರು ತನಿಖೆ, ಮುಂದುವರಿದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯ ಕಂಡು ಬಂದಿಲ್ಲ. ಬಾಹ್ಯ ಶಕ್ತಿಗಳಿಂದ ಲೋಕಾಯುಕ್ತ ಸಂಸ್ಥೆಯು ಪ್ರಭಾವಕ್ಕೆ ತುತ್ತಾಗುವ ಸಾಧ್ಯತೆಯ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ತಮ್ಮ ತೀರ್ಪುಗಳಲ್ಲಿ ಹೇಳಿವೆ. ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಲಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಈ ಪ್ರಕರಣದ ತನಿಖೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ.19ರಂದು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ತಿರಸ್ಕರಿಸಿ ಸೆ.24ರಂದು ಹೈಕೋರ್ಟ್ ಆದೇಶಿಸಿತ್ತು.
ಈ ಆದೇಶ ಹೊರಬಿದ್ದ ಬೆನ್ನಲ್ಲೇ ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.