ಬೆಂಗಳೂರು: ರಿಯಲ್ ಎಸ್ಟೇಟ್ ಡೀಲರ್‌ನ ಕಾರು ಅಡ್ಡಗಟ್ಟಿ ಗಾಂಜಾ ಕೇಸ್ ಹಾಕುವುದಾಗಿ ಬೆದರಿಸಿ ₹4 ಲಕ್ಷ ಸುಲಿಗೆ ಮಾಡಿದ ಆರೋಪದಡಿ ಎಎಸ್ಐ, ಕಾನ್ಸ್‌ಟೇಬಲ್, ಆಟೋ ಚಾಲಕ ಸೇರಿ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ವಿಶೇಷ ವಿಚಾರಣಾ ದಳದ ಎಎಸ್‌ಐ ಸಗೀರ್ ಅಹಮದ್, ಹೆಡ್ ಕಾನ್‌ಸ್ಟೇಬಲ್ ಯತೀಶ್ ಮತ್ತು ಆಟೋ ಚಾಲಕ ಸಮೀರ್ ಬಂಧಿತರು.
ರಿಚ್ಮಂಡ್ ಟೌನ್ ನಿವಾಸಿಯಾಗಿರುವ ರಿಯಲ್ ಎಸ್ಟೇಟ್ ಡೀಲರ್ ನಾಗಾರ್ಜುನ ಗಣೇಶನು ವ್ಯಕ್ತಿಯೊಬ್ಬರಿಂದ ಹಣ ಪಡೆಯಲು ಜ.5 ರಂದು
ಮಧ್ಯಾಹ್ನ ಸುಮಾರು 2.15ಕ್ಕೆ ಜಯನಗರ 5ನೇ ಬ್ಲಾಕ್‌ನ ಕೂಲ್ ಜಾಯಿಂಟ್ ಸಿಗ್ನಲ್ ಬಳಿ ಹೋಗು ವಾಗ, ಇಬ್ಬರು ಅಪರಿಚಿತರು ಕಾರನ್ನು ಅಡ್ಡಗಟ್ಟಿದ್ದಾರೆ. ಈ ಪೈಕಿ ಒಬ್ಬ ಪೊಲೀಸ್ ಗುರುತಿನ ಚೀಟಿ ತೋರಿಸಿ ನಿಮ್ಮ ಕಾರಿನಲ್ಲಿ ಗಾಂಜಾ ಇರುವ ಬಗ್ಗೆ ಮಾಹಿತಿ ಇದ್ದು, ತಪಾಸಣೆ ನಡೆಸಬೇಕು ಎಂದಿದ್ದಾನೆ. ಬಳಿಕ ಇಬ್ಬರು ಕಾರಿನೊಳಗೆ ಕುಳಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಣ ಕೊಡು,ಇಲ್ಲವಾದರೆ,ಗಾಂಜಾ ಸಾಗಣೆ ಹೆಸರಿನಲ್ಲಿ ಸುಳ್ಳು ಕೇಸ್ ಹಾಕುವುದಾಗಿ ಬೆದರಿಸಿದ್ದಾರೆ.
ನಂತರ ಕಾರಿನ ಸೀಟ್ ಮೇಲಿದ್ದ ಬ್ಯಾಗ್ ತೆಗೆದು ನೋಡಿದ್ದಾರೆ. ಬಳಿಕ ಬ್ಯಾಗಿನಲ್ಲಿದ್ದ ₹4 ಲಕ್ಷ ಹಣ ಕಿತ್ತುಕೊಂಡಿದ್ದಾರೆ. ಆಟೋ ಚಾಲಕನಾಗಿರುವ ಆರೋಪಿ ಸಮೀರ್ ಈ ಇಬ್ಬರಿಗೂ ಪರಿಚಿತನಾಗಿದ್ದು ನಾಗಾರ್ಜುನ್ ಗಣೇಶ್ ಬಳಿ ಹಣ ಇರುವ ಮಾಹಿತಿ ತಿಳಿದುಕೊಂಡು ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.