ರಾಜ್ಯದಲ್ಲಿರುವ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಮತ್ತು ಗಡಿಪಾರು ಮಾಡಲು ಕೈಗೊಂಡಿರುವ ಕ್ರಮಗಳ ವಿವರಗಳನ್ನು ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಅಧಿಕೃತ ವೀಸಾ ಹಾಗೂ ಪಾಸ್‌ಪೋರ್ಟ್ ಹೊಂದಿರದೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇಂತಹವರ ಪತ್ತೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮಾದಕ ದ್ರವ್ಯ ಸಂಗ್ರಹ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಮತ್ತು ಬಂಧನದಿಂದ ತಮ್ಮನ್ನು ಬಿಡುಗಡೆ ಮಾಡಲು ಆದೇಶಿ ಸಬೇಕು ಎಂದು ಕೋರಿ ಕೋಗಿಲು ಲೇಔಟ್ ವಿಳಾಸ ಹೊಂದಿರುವ ನೈಜೀರಿಯಾ ಪ್ರಜೆ ಗಳಾದ ಇಮೆಕಾ ಜೇಮ್ಸ್ ಐವೊಬಾ ಹಾಗೂ ವುಡರಿಕ್ ಫಿಡೆಲಿಸ್ ಎಂಬುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಎಫ್‌ಆರ್‌ಆರ್‌ಒ ಪರ ಕೇಂದ್ರ ಸರ್ಕಾರದ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅರ್ಜಿದಾರರು ಮಾದಕ ದ್ರವ್ಯದೊಂದಿಗೆ ಸಿಕ್ಕಿ ಬಗ್ಬಿದ್ದಿದ್ದಾರೆ. ವಿಸಾ ಅವಧಿ ಮುಗಿದರೂ ಅಕ್ರಮವಾಗಿ ಇಲ್ಲೆ ಉಳಿದುಕೊಂಡಿದ್ದಾರೆ. ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳನ್ನು ನೋಂದಾಯಿಸಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಈ ವಿಚಾರ ಕೇಳಿ ಕಳವಳ ವ್ಯಕ್ತಪಡಿಸಿದ ನ್ಯಾ.ಎಂ.ನಾಗಪ್ರಸನ್ನ ಅವರು ಅಧಿಕೃತ ವೀಸಾ ಜಾಗೂ ಪಾಸ್‌ಪೋರ್ಟ್ ಇಲ್ಲದೆ ವಿದೇಶಿಗರು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ದೇಶದ ಭದ್ರತೆಗೆ ಅಪಾಯ ತಂದೊಡ್ಡಲಿದೆ. ಅವರನ್ನು ಪತ್ತೆ ಹಚ್ಚಿ ಅವರವರ ದೇಶಕ್ಕೆ ಕಳುಹಿಸಬೇಕು. ಈ ವಿಚಾರದಲ್ಲಿ ಸರ್ಕಾರ ಮೌನ ವಹಿಸಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ, ರಾಜ್ಯದಲ್ಲಿರುವ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಮತ್ತು ಗಡಿಪಾರು ಮಾಡಲು ಕೈಗೊಂಡಿರುವ ಕ್ರಮಗಳ ವಿವರಗಳನ್ನು ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು.