ಬೆಂಗಳೂರು: ಬಿಬಿಎಂಪಿ ನೀಡಿದ್ದ ಅನುದಾನ ಹಣವನ್ನು ಆರ್ಥಿಕ ನಿಯಮ ಮೀರಿ ಬೇಕಾ ಬಿಟ್ಟಿ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿ ವೆಚ್ಚ ಮಾಡಿದ ಬಿಬಿಎಂಪಿಯ ಶಾಲಾ -ಕಾಲೇಜು ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದ್ದು 12 ಶಿಕ್ಷಕರಿಗೆ ನೋಟಿಸ್ ನೀಡಿದೆ.
ಪ್ರತಿ ವರ್ಷ ಬಿಬಿಎಂಪಿಯ ಬಜೆಟ್‌ನಲ್ಲಿ ಶಾಲಾ ಕಾಲೇಜು ವಾರ್ಷಿಕೋತ್ಸವ, ಪರೀಕ್ಷಾ ಶುಲ್ಕ, ಶೈಕ್ಷಣಿಕ ಪ್ರವಾಸ ಹಾಗೂ ಸಣ್ಣ-ಪುಟ್ಟ ರಿಪೇರಿಗಳಿಗೆ ಅಗತ್ಯವಿರುವ ಅನುದಾನವನ್ನು ಶಾಲಾ ಕಾಲೇಜು ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾ ಗುತ್ತದೆ. ಜಮಾ ಮಾಡಲಾದ ಮೊತ್ತವನ್ನು ಮುಖ್ಯಸ್ಥರು ನಿಯಮಾನುಸಾರ ಡ್ರಾ ಮಾಡಿ ಬಳಕೆ ಮಾಡಬೇಕು. ಆದರೆ, ಬಿಬಿಎಂಪಿಯ 34 ಪ್ರೌಢ ಶಾಲೆಯ ಮುಖ್ಯೋಪಾದ್ಯಾಯರು, 16 ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, 18 ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ 2 ಪದವಿ ಕಾಲೇಜಿನ ಪ್ರಾಂಶುಪಾಲರು ಆರ್ಥಿಕ ನಿಯಮ ಉಲ್ಲಂಘಿಸಿರುವುದು ಬ್ಯಾಂಕ್ ಪಾಸ್ ಬುಕ್ ಪರಿಶೀಲನೆ ವೇಳೆ ಕಂಡು ಬಂದಿದೆ.
ಈ ಸಂಬಂಧ ಈಗಾಗಲೇ ಶಾಲಾ ಮುಖ್ಯಸ್ಥರಿಂದ ಲಿಖಿತವಾಗಿ ವಿವರಣೆ ಪಡೆಯಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.