ಸುದ್ದಿ

₹3 ಲಕ್ಷ ಲಂಚ ಪಡೆಯುತ್ತಿದ್ದ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಬಂಧನ

Share It

ಬೆಂಗಳೂರು: ಗ್ರಾಹಕರೊಬ್ಬರ ವಿದ್ಯುತ್ ಮೀಟರ್ ಸಕ್ರಿಯ ಗೊಳಿಸಲು ಮತ್ತು ಹೊಸ ಸಂಪರ್ಕ ಕಲ್ಪಿಸಲು ₹ 3 ಲಕ್ಷ ರು. ಲಂಚ ಸ್ವೀಕರಿಸುವಾಗ ಬೆಸ್ಕಾಂನ ಕಾರ್ಯ ನಿರ್ವಾಹಕ ಇಂಜಿನಿಯ‌ರ್ ಅನ್ನು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಬೆಸ್ಕಾಂ ಇಂದಿರಾನಗರ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ವಿ.ರಾಜೇಶ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಅಧಿಕಾರಿ. ವಿದ್ಯುತ್ ಗುತ್ತಿಗೆದಾರ ಎಸ್.ಎನ್.ದಿಲೀಪ್ ಅವರು ನೀಡಿದ ದೂರಿನ ಮೇರೆಗೆ ಸೋಮವಾರ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಬೆಸ್ಕಾಂ ಇಇ ಕೆ.ವಿ.ರಾಜೇಶ್ ನ್ನು ಬಲೆಗೆ ಬೀಳಿಸಿದ್ದಾರೆ.

ಗ್ರಾಹಕರೊಬ್ಬರ ವಿದ್ಯುತ್‌ ಮೀಟರ್‌ಗಳನ್ನು ಪುನರ್ ಸಕ್ರಿಯಗೊಳಿಸಲು ಮತ್ತು 24 ಕಿ.ವ್ಯಾ. ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ವಿ.ರಾಜೇಶ್ 7 ಲಕ್ಷ ರು. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಸಂಬಂಧ ವಿದ್ಯುತ್ ಗುತ್ತಿಗೆದಾರ ದಿಲೀಪ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ರಾಜೇಶ್ ಬೆಸ್ಕಾಂ ಕಚೇರಿ ಬಳಿ ಮೂರು ಲಕ್ಷ ರು. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share It

You cannot copy content of this page