ಬೆಳಗಾವಿ: ಇಡೀ ರಾಜ್ಯವೇ ತಲೆತಗ್ಗಿಸುವಂತೆ ಮಾಡಿದ್ದ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 12 ಮಂದಿ ಅಪರಾಧಿಗಳಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.
ಮಹಿಳೆಯರ ಮೇಲಿನ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ಈ ತೀರ್ಪು ಸಮಾಜಕ್ಕೆ ನೀಡಿದೆ.
ನ್ಯಾ. ಎಚ್.ಎಸ್. ಮಂಜುನಾಥ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿವಿಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಶಿಕ್ಷೆಗೊಳಗಾದ ಅಪರಾಧಿಗಳನ್ನು ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಿಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ, ಗಂಗವ್ವ ನಾಯಿಕ, ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ, ಶೋಭಾ ನಾಯಿಕ, ಲಕ್ಕವ್ವ ನಾಯಿಕ ಹಾಗೂ ಶಿವಪ್ಪ ವನ್ನೂರಿ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದ ಈ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿತ್ತು. ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸಿ, ಹಲ್ಲೆ ನಡೆಸಲಾಗಿತ್ತು. ಈ ಅಮಾನುಷ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಮನಸ್ಸನ್ನು ಕಲುಷಿತಗೊಳಿಸಿತ್ತು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.