ಬೆಂಗಳೂರು: ದೂರದರ್ಶನ ಕೇಂದ್ರಕ್ಕೆ ಸೇರ್ಪಡೆಯಾದಾಗಿನಿಂದಲೂ ಸಹೋದ್ಯೋಗಿಗಳ ವಿರುದ್ಧ ದುರುದ್ದೇಶಪೂರಿತ ಪ್ರಕರಣ ದಾಖಲಿಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿರುವ ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ಬಡ್ಡಿ ಸಹಿತ 1.20 ಲಕ್ಷ ರೂ. ದಂಡ ಪಾವತಿಸಬೇಕು ಹಾಗೂ ಪ್ರಮುಖ ದಿನಪತ್ರಿಕೆಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಬೆಂಗಳೂರಿನ 14ನೇ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ದೂರದರ್ಶನ ಮಾಜಿ ಉದ್ಯೋಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರ ನಡೆ ಸರ್ವತಾ ಒಪ್ಪುವಂಥದ್ದಲ್ಲ ಎಂದು ಕಟುವಾಗಿ ನುಡಿದಿರುವ ಬೆಂಗಳೂರಿನ ನ್ಯಾಯಾಲಯವು ಫಿರ್ಯಾದಿ ಎನ್ ಕೆ ಮೋಹನ್ ರಾಮ್ ಅವರಿಗೆ ₹1.2 ಲಕ್ಷ ರೂಪಾಯಿ ಹಣವನ್ನು ಪರಿಹಾರವಾಗಿ ಪಾವತಿಸಲು ಜೋಶಿಗೆ ಆದೇಶಿಸಿದೆ.
1984ರಲ್ಲಿ ದೂರದರ್ಶನ ನಿರ್ದೇಶಕರಾಗಿದ್ದಾಗ ಮಹೇಶ್ ಜೋಶಿ ಅವರು ಮೋಹನ್ ರಾಂ ಸೇರಿ ಏಳು ಸಹೋದ್ಯೋಗಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಆ ಪ್ರಕರಣ ಸುಳ್ಳು ಎಂದು 2013ರಲ್ಲಿ ಹೈಕೋರ್ಟ್ ತೀರ್ಪು ನೀಡಿ, ಪ್ರಕರಣವನ್ನು ವಜಾ ಮಾಡಿತ್ತು. ಹೈಕೋರ್ಟ್ ತೀರ್ಪಿನ ನಂತರ ಮೋಹನ್ ರಾಂ ಅವರು, ತಮಗಾಗಿದ್ದ ಮಾನಸಿಕ ಹಿಂಸೆ ಮತ್ತು ಆರ್ಥಿಕ ನಷ್ಟ ಸೇರಿ ₹1.20 ಲಕ್ಷ ಪರಿಹಾರ ಕೋರಿ ನಗರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ನಕಲಿ ಪ್ರಕರಣ ದಾಖಲಿಸಿ ಮಾನಸಿಕ ವೇದನೆ ಸೃಷ್ಟಿಸುವುದಲ್ಲದೇ ಅಪಾರ ನಷ್ಟಕ್ಕೆ ಕಾರಣರಾಗಿರುವ ಮಹೇಶ್ ಜೋಶಿ ₹1.2 ಲಕ್ಷ ಹಣವನ್ನು ವಾರ್ಷಿಕ ಶೇ. 24ರ ಬಡ್ಡಿ ದರದಲ್ಲಿ ಪಾವತಿಸಲು ಆದೇಶಿಸಬೇಕು ಎಂದು ಕೋರಿ ಎನ್ ಕೆ ಮೋಹನ್ ರಾಮ್ ಸಲ್ಲಿಸಿದ್ದ ಮೂಲ ದಾವೆಯನ್ನು 14ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶೆ ನಳಿನಿ ಕುಮಾರ್ ಅವರು ಪುರಸ್ಕರಿಸಿದ್ದಾರೆ.
“ಮಹೇಶ್ ಜೋಶಿ ಅವರು ತಮ್ಮ ವೃತ್ತಿ ಬದುಕು ಆರಂಭವಾದಗಿನಿಂದ ಇಲ್ಲಿಯವರೆಗೂ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಪ್ರತೀಕಾರ ತೀರಿಸಿಕೊಳ್ಳುವ ರೀತಿ ನಡೆದುಕೊಂಡಿದ್ದಾರೆ. ತನ್ನ ಸಹೋದ್ಯೋಗಿಗಳಿಂತ ಮೇಲಿನ ಸ್ಥಾನದಲ್ಲಿದ್ದ ಮಹೇಶ್ ಜೋಶಿ ಅವರು ತಮ್ಮ ವಿರುದ್ಧದ ನಂಬಿಕೆಗಳನ್ನು ಸುಳ್ಳು ಎಂದು ಸಾಬೀತುಪಡಿಸುವ ರೀತಿಯಲ್ಲಿ ನಡೆದುಕೊಳ್ಳಬೇಕಿತ್ತು. ಅಲ್ಲದೇ, ತಾನು ವಹಿಸಿಕೊಂಡಿರುವ ಜವಾಬ್ದಾರಿಯ ಮೂಲಕ ಸಂಸ್ಥೆಯ ಬೆಳವಣಿಗೆಗೆ ಮುಂದಾಗಬೇಕಿತ್ತು” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಮುಂದುವರೆದು, “ಜೋಶಿ ಅವರು ತಮ್ಮ ಸಹೋದ್ಯೋಗಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯ ವಿಚಕ್ಷಣಾ ವಿಭಾಗಕ್ಕೆ ಜೋಶಿ ಬರೆದಿರುವ ಪತ್ರದಲ್ಲಿ ಪ್ರತಿಯೊಂದು ಶಬ್ದವೂ ಎನ್ ಕೆ ಮೋಹನ್ ರಾಮ್ ವಿರುದ್ಧ ಪ್ರತೀಕಾರಕ್ಕೆ ಉದಾಹರಣೆಯಾಗಿದೆ. ಹೀಗಾಗಿ, ಎನ್ ಕೆ ಮೋಹನ್ ರಾಮ್ ಕೋರಿರುವಂತೆ ಪರಿಹಾರ ಪಾವತಿಸಲು ಜೋಶಿಗೆ ಆದೇಶಿಸುವುದಷ್ಟೇ ಸಾಲದು. ಈ ಮೂಲಕ ಸರ್ಕಾರಿ ಅಧಿಕಾರಿಗಳು ತಮ್ಮ ಸಹೋದ್ಯೋಗಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸುವವರಿಗೆ ಸಂದೇಶ ರವಾನಿಸಬೇಕಿದೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.
ಎನ್ ಕೆ ಮೋಹನ್ ರಾಮ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಹೇಶ್ ಜೋಶಿ ಯತ್ನಿಸಿರುವುದು ದೃಢವಾಗಿದ್ದು, ಫೆಬ್ರವರಿ 24 ಅಥವಾ 25ರಂದು ಮಹೇಶ್ ಜೋಶಿ ಅವರು ಎನ್ ಕೆ ಮೋಹನ್ ರಾಮ್ ಮತ್ತು ತನ್ನ ಇತರೆ ಸಹೋದ್ಯೋಗಿಗಳಿಗೆ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಬೇಷರತ್ ಕ್ಷಮೆಯಾಚಿಸಬೇಕು. ಅಂದು ಸಂಜೆ 6.ವಿರುದ್ಧ 8.30ರ ನಡುವೆ ಮೂರು ಎಪಿಸೋಡ್‌ಗಳಲ್ಲಿ ಕನ್ನಡ ದೂರರ್ಶನ ಕೇಂದ್ರದಲ್ಲಿ ಬೇಷರತ್ ಕ್ಷಮೆ ಕೋರಿರುವುದು ಪ್ರಸಾರವಾಗಬೇಕು. ಈ ನಿರ್ದೇಶನದ ಅನುಪಾಲನೆಯನ್ನು ಏಳು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಆದೇಶ ಪಾಲಿಸಲು ಮಹೇಶ್ ಜೋಶಿ ವಿಫಲವಾದರೆ ಕಚೇರಿಯು ಸ್ವಯಂಪ್ರೇರಿತವಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು. ಅಲ್ಲದೇ, ಏಳು ದಿನ ಜೈಲು ವಾಸ ಅನುಭವಿಸಬೇಕು” ಎಂದು ನ್ಯಾಯಾಲಯ ಮಹತ್ವದ ಆದೇಶ ಮಾಡಿದೆ.