ಬೆಂಗಳೂರು: ಕರ್ತವ್ಯದಲ್ಲಿದ್ದ ಸಮಯದಲ್ಲಿ ನಿದ್ರೆಗೆ ಮಾಡುತ್ತಿದ್ದ ಆರೋಪದ ಮೇಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಡಿಪೋದಲ್ಲಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದ ಪೇದೆಯನ್ನು ಸೇವೆಯಿಂದ ಅಮಾನತುಪಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಅಮಾನತು ಆದೇಶ ರದ್ದುಪಡಿಸಲು ಕೋರಿ ಪೇದೆ ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ನಿದ್ರೆ ಕೊರತೆಯಾದಲ್ಲಿ ಯಾವುದೇ ಮನುಷ್ಯ ಎಲ್ಲಿಯಾದರೂ ನಿದ್ರೆಗೆ ಜಾರುತ್ತಾನೆ. ಜೀವನದ ಸಮತೋಲನ ಕಾಯ್ದುಕೊಳ್ಳಲು ಉದ್ಯೋಗಿಗಳಿಗೆ ಕೆಲಸದ ಜತೆಗೆ ಸರಿಯಾದ ನಿದ್ರೆಯೂ ಅತ್ಯಗತ್ಯ. ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡಲು ಉದ್ಯೋಗಿಗೆ ಹೇಳಿದರೆ, ಆಯಾಸ ಉದ್ಯೋಗಿಯನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ ಎಂದು ಕೋಟ್೯ ಅಭಿಪ್ರಾಯಪಟ್ಟಿದೆ.
ವಿಚಕ್ಷಣಾ ವರದಿ ಪ್ರಕಾರ 2024ರ ಏ.23ರಂದು ಪೇದೆ ಚಂದ್ರಶೇಖರ್ ಅವರು ಕರ್ತವ್ಯದಲ್ಲಿರುವಾಗ ನಿದ್ರೆ ಮಾಡುತ್ತಿರುವ ವಿಡಿಯೋ ಚಿತ್ರೀಕರಿಸಲಾಗಿತ್ತು. ಈ ಆಧಾರದ ಮೇಲೆ ಪೇದೆಯನ್ನು ಅಮಾನತು ಮಾಡಲಾಗಿತ್ತು. ಈ ಅಮಾನತು ಆದೇಶ ಪ್ರಶ್ನಿಸಿ ಪೇದೆ ಕೋಟ್೯ ಮೊರೆ ಹೋಗಿದ್ದರು.