ಬೆಂಗಳೂರು: ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಡಿಯಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ₹5200 ಕೋಟಿ ನಷ್ಟ ಆಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ‘ತೈಲ ಬೆಲೆ ಸಿಬ್ಬಂದಿ ವೇತನ ವಾಹನ ಬಿಡಿಭಾಗಗಳ ಬೆಲೆ ಹೆಚ್ಚಳದಿಂದ ಆರ್ಥಿಕ ಹೊರೆ ಉಂಟಾಗಿದೆ. ಹೀಗಾಗಿ ಕಳೆದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಲಾಗಿದೆ’ ಎಂದರು.
‘ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ 2024-25ನೇ ಸಾಲಿನಲ್ಲಿ ಮೀಸಲಿಟ್ಟಿದ್ದ ₹9978 ಕೋಟಿ ಅನುದಾನದ ಪೈಕಿ ₹7796 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಬಾಕಿ ಸುಮಾರು ₹2 ಸಾವಿರ ಕೋಟಿ ಬಿಡುಗಡೆ ಆಗಬೇಕಿದೆ’ ಎಂದರು.
‘ಕೆಎಸ್‌ಆರ್‌ಟಿಸಿ ನೌಕರರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಈಗಾಗಲೇ ಜಾರಿಯಲ್ಲಿದ್ದು ಇತರ ಸಾರಿಗೆ ನಿಗಮಗಳಿಗೂ ಈ ಯೋಜನೆ ವಿಸ್ತರಿಸಲಾಗಿದೆ. ಇತರ ಇಲಾಖೆಗಳಲ್ಲಿ ಮೂರು ತಿಂಗಳ ಒಳಗೆ ನೋಂದಣಿ ಪೂರ್ಣಗೊಳಿಸಿ ಒಡಂಬಡಿಕೆಯಾದ ರಾಜ್ಯದ 350 ಆಸ್ಪತ್ರೆಗಳಲ್ಲಿ ನೌಕರರು ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗುವುದು’ ಎಂದರು