ನವದೆಹಲಿ: ಉಚಿತವಾಗಿ ಜನರಿಗೆ ಕೊಡುಗೆಗಳನ್ನು ನೀಡುವುದರಿಂದ ದೇಶದಲ್ಲಿ ಬಡತನ ನಿರ್ಮೂಲನೆ ಅಸಾಧ್ಯ. ಬದಲಿಗೆ ಉದ್ಯೋಗ ಸೃಷ್ಟಿ ಮಾಡುವುದು ಬಡತನವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹೊಸ ಉದ್ಯಮಗಳನ್ನು ಸೃಷ್ಟಿಸಲು ಸಾಧ್ಯವಾದರೆ, ಬೆಳಗ್ಗಿನ ಬಿಸಿಲಿಗೆ ಇಬ್ಬನಿ ಮಾಯವಾದಂತೆ ಬಡತನವೂ ನಿರ್ಮೂಲನೆಯಾಗುತ್ತದೆ ಎಂದು ಹೇಳಿದ್ದಾರೆ.
‘ನೀವು ಪ್ರತಿಯೊಬ್ಬರೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ ನೀವು ಬಡತನದ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತೀರಿ ಎಂಬುವುದು ಮುಖ್ಯ. ಉಚಿತ ಕೊಡುಗೆಗಳು ಬಡತನ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಇದುವರೆಗೂ ಉಚಿತ ಕೊಡುಗೆಗಳನ್ನು ಕೊಟ್ಟಿರುವ ಯಾವ ದೇಶವೂ ಬಡತನದಿಂದ ಹೊರಬಂದಿಲ್ಲ. ಬದಲಿಗೆ ನಾವು ಹೆಚ್ಚು ಉದ್ಯಮಗಳನ್ನು ಸೃಷ್ಟಿಸಬೇಕು’ ಎಂದಿದ್ದಾರೆ.