ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಬೆಂಗಳೂರು: ಅಪ್ರಾಪ್ತ ಬಾಲಕಿ ಮದುವೆಯಾಗಿ ಬಂದಿದ್ದ ಯುವಕನಿಗೆ ರೂಮ್ ಬಾಡಿಗೆಗೆ ನೀಡಿದ್ದ ಲಾಡ್ಜ್ ಮಾಲಿಕನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ರೂಮ್ ಬಾಡಿಗೆಗೆ ಕೇಳಿಕೊಂಡು ಹುಡುಗ ಮತ್ತು ಹುಡುಗಿ ನಮ್ಮ ಲಾಡ್ಜ್ ಗೆ ಬಂದಿದ್ದರು. ಈ ವೇಳೆ ನಮ್ಮ ಲಾಡ್ಜ್ ಮ್ಯಾನೇಜರ್ ರೂಮ್ ಬಾಡಿಗೆಗೆ ನೀಡಿದ್ದಾರೆ. ಆ ಬಳಿಕ ಯುವಕನ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಲಾಗಿದೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಹಾಗಿದ್ದೂ ನನ್ನನ್ನು ಕೂಡ ಪ್ರಕರಣದಲ್ಲಿ ನಾಲ್ಕನೇ ಆರೋಪಿ ಮಾಡಲಾಗಿದೆ. ನಾನು ನಿರಪರಾಧಿದ್ದು, ನನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಕೇಸ್ ರದ್ದುಪಡಿಸಬೇಕು ಎಂದು ಕೋರಿ ಲಾಡ್ಜ್ ಮಾಲಿಕ ಹಾಗೂ ಉದ್ಯಮಿ ವೈ.ಕಮಲ್ ಕುಮಾರ್ ಎಂಬುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧ ಚಿಕ್ಕಬಳ್ಳಾಪುರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 114, 343, 363, 375(A), 376, 34, ಪೋಕ್ಸೊ ಕಾಯ್ದೆಯ ಸೆಕ್ಷನ್ 4, 8, 12, 17 ಮತ್ತು ಬಾಲ್ಯ ವಿವಾಹ ಕಾಯ್ದೆಯ ಸೆಕ್ಷನ್ 9 ಅಡಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಾಲಕಿ ಮ್ಯಾಜಿಸ್ಪ್ರೇಟ್ ಮುಂದೆ ನೀಡಿದ್ದ ಹೇಳಿಕೆಯಲ್ಲಿ ನಾನು ಮತ್ತು ನನ್ನ ಗಂಡ (ಯುವಕ) ಲಾಡ್ಜ್‌ನಲ್ಲಿ ರೂಮ್ ಪಡೆದು ಇದ್ದದ್ದು ನಿಜ. ಆದರೆ, ಇಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಕೇಸ್ ಮುಂದುವರಿಸುವುದು ಸೂಕ್ತವಲ್ಲ ಎಂದು ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಬಾಲಕಿಯನ್ನು ಪ್ರಕರಣದ ಆರೋಪಿ ಯುವಕ 2022 ರ ನವೆಂಬರ್ 28 ರಂದು ಆಂಧ್ರಪ್ರದೇಶದ ತಿರುಪತಿಗೆ ಕರೆದುಕೊಂಡು ಹೋಗಿ ಮದುವೆಯಾಗಿದ್ದ. ಇಬ್ಬರೂ ಸ್ಥಳೀಯ ಲಾಡ್ಜ್ ನಲ್ಲಿ ತಂಗಿದ್ದರು. ಮಗಳು ಕಾಣೆಯಾದ ಬಗ್ಗೆ ಪೋಷಕರು ದೂರು ನೀಡಿದ್ದರು. ಈ ದೂರಿನ ತನಿಖೆ ನಡೆಸಿದ ಪೊಲೀಸರು ಐವರನ್ನು ಆರೋಪಿಗಳನ್ನಾಗಿ ನಮೂದಿಸಿದ್ದರು. ತನ್ನ ತಪ್ಪಿಲ್ಲವೆಂದು ಲಾಡ್ದ್ ಮಾಲಿಕರು ಹೈಕೋರ್ಟ್ ಮೊರೆ ಹೋಗಿದ್ದರು.
(CRL.P 2822/2023)