ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಅತ್ಯಾಚಾರಕ್ಕೆ ಒಳಗಾಗಿದ್ದ 16 ವರ್ಷದ ಯುವತಿ ಗರ್ಭಿಣಿ ಎಂದು ತಿಳಿದು ಬಂದ ನಂತರ ಬೇಡದ ಗರ್ಭ ತೆಗೆಸಲು ವೈದ್ಯರನ್ನು ಸಂಪರ್ಕಿಸಿದ್ದರು. ಅತ್ಯಾಚಾರದಿಂದ ಸೃಷ್ಟಿಯಾಗಿದ್ದ ಗರ್ಭ ತೆಗೆಸಲು ಮಕ್ಕಳ ಕಲ್ಯಾಣ ಸಮಿತಿಯೂ ಸೂಚಿಸಿತ್ತು. ಆದರೆ, ವೈದ್ಯರು ಕಾನೂನು ತೊಡಕು ಹಾಗೂ ಗರ್ಭಪಾತದ ಅವಧಿ ಮೀರಿರುವ ಕುರಿತಂತೆ ಅಸಹಾಯಕತೆ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಗರ್ಭಪಾತ ಸಾಧ್ಯವಿಲ್ಲ ಎಂದಿದ್ದರಿಂದ ಸಂತ್ರಸ್ತೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು.
ಈ ಕುರಿತಂತೆ ಸಂತ್ರಸ್ತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಗರ್ಭಪಾತ ನಡೆಸಲು ವೈದ್ಯರಿಗೆ ಸೂಚಿಸುವಂತೆ ಕೋರಿದ್ದರು. 24 ವಾರಗಳು ತುಂಬಿವೆ ಎಂಬ ಕಾರಣಕ್ಕೆ ಗರ್ಭ ತೆಗೆಸಲು ಒಪ್ಪದ ವೈದ್ಯಾಧಿಕಾರಿಗಳ ಕ್ರಮವನ್ನು ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಅಪ್ರಾಪ್ತ ಸಂತ್ರಸ್ತೆ ಸಲ್ಲಿಸಿದ್ದ ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಗರ್ಭಪಾತಕ್ಕೆ ಅನುಮತಿ ನೀಡಿದೆ.
ಸಂತ್ರಸ್ತೆಗೆ ರಿಲೀಫ್ ನೀಡಿರುವ ಹೈಕೋರ್ಟ್, ಸಂತಾನೋತ್ಪತ್ತಿ ಆಯ್ಕೆಯು ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಹಾಗೆಯೇ, ಅತ್ಯಾಚಾರದಿಂದ ಉಂಟಾದ ಗರ್ಭವನ್ನು ಹೊರುವಂತೆ ಆಕೆಗೆ ಬಲವಂತ ಮಾಡಲಾಗದು ಎಂದು ಸ್ಪಷ್ಟಪಡಿಸಿದೆ. ಹೈಕೋರ್ಟ್ ತನ್ನ ಆದೇಶದಲ್ಲಿ 1971ರ ವೈದ್ಯಕೀಯ ಗರ್ಭಪಾತ ಕಾಯ್ದೆಯಲ್ಲಿ ಕೆಲವೊಂದು ಶಾಸನಬದ್ಧ ಮಿತಿಗಳಿವೆ. ಆದರೆ, ಅವು ವೈದ್ಯರಿಗೆ ಮಾತ್ರ ಅನ್ವಯಿಸುತ್ತವೆ. ಅತ್ಯಾಚಾರ ಮತ್ತು ಅದರಿಂದಾಗಿಯೇ ಗರ್ಭಿಣಿಯಾಗಿರುವ ಅಪ್ರಾಪ್ತೆ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುತ್ತಾಳೆ. ಇಂತಹ ಸಂದರ್ಭದಲ್ಲಿ ಗರ್ಭಪಾತಕ್ಕೆ ಸಮ್ಮತಿಸದಿದ್ದರೆ ಅಪರಾಧದ ಹೊರೆಯನ್ನು ಆಕೆಯೇ ಬಲವಂತದಿಂದ ಹೊರಬೇಕಾಗುತ್ತದೆ ಎಂದು ಸಂತ್ರಸ್ತೆಯ ಪರಿಸ್ಥಿತಿ ಕುರಿತು ಕಳಕಳ ವ್ಯಕ್ತಪಡಿಸಿದೆ.
ಮುಂದುವರೆದು, ಅತ್ಯಾಚಾರದಿಂದ ಉಂಟಾದಂತಹ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸುವ ಅಗತ್ಯವನ್ನು ಸಾಂವಿಧಾನಿಕ ನ್ಯಾಯಾಲಯಗಳು ವಿಭಿನ್ನ ರೀತಿಯಲ್ಲಿ ಪರಿಗಣಿಸುವ ಅಗತ್ಯವಿದೆ. ಇಂತಹ ವಿಚಾರಗಳಲ್ಲಿ ಮಹಿಳೆಯ ಅಪೇಕ್ಷೆಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ಯಾರೂ ಸೂಚಿಸಲಾಗದು. ಮಹಿಳೆಗೆ ತಾಯ್ತನದ ಬಗ್ಗೆ ಸುಂದರ ಪರಿಕಲ್ಪನೆ ಇದ್ದು, ಆಕೆಯ ಪರಿಕಲ್ಪನೆಯ ತಾಯ್ತನದ ಆಯ್ಕೆಗೆ ವಿರುದ್ದವಾಗಿ ಮಗುವಿಗೆ ಜನ್ಮ ನೀಡುವಂತೆ ಯಾರೂ ಒತ್ತಾಯಿಸಲಾಗದು. ಅದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮಹಿಳೆಗೆ ನೀಡಿರುವ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್ ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ. ಅಂತೆಯೇ, ಮಹಿಳೆಯು ತನ್ನ ದೈಹಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳುವ ಪವಿತ್ರ ಹಕ್ಕನ್ನು ಹೊಂದಿರುತ್ತಾಳೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಅಂತಿಮವಾಗಿ ಸ್ತ್ರೀರೋಗ ತಜ್ಞರು, ಮನೋವಿಜ್ಞಾನಿಗಳು ಮತ್ತು ಇತರೆ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ನೀಡಿರುವ ಅಭಿಪ್ರಾಯಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರ ಸಂತ್ರಸ್ತೆಯ ಗರ್ಭದಲ್ಲಿನ ಭ್ರೂಣವನ್ನು ತೆಗೆಸಲು ಸಮ್ಮತಿಸಿದೆ. ಜತೆಗೆ, ವೈದ್ಯಕೀಯ ಗರ್ಭಪಾತ ಕಾಯ್ದೆ 1971ರ ನಿಬಂಧನೆಗಳು ಮತ್ತು ವೈದ್ಯಕೀಯ ಮಂಡಳಿಯ ಅಭಿಪ್ರಾಯಕ್ಕೆ ಬದ್ಧವಾಗಿ ಭ್ರೂಣವನ್ನು ತೆಗೆಯಯುವಂತೆ ಬೆಳಗಾವಿ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿದೆ.
ಹಿನ್ನೆಲೆ: 2021ರ ಫೆಬ್ರವರಿಯಲ್ಲಿ ಅಪ್ರಾಪ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಎಸಗಿದ್ದರಿಂದ ಆಕೆ ಗರ್ಭಿಣಿಯಾಗಿದ್ದಳು. ಈ ದುರ್ಘಟನೆ ಸಂಬಂಧ ಸದಲಗಾ ಠಾಣೆ ಪೊಲೀಸರು ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಅತ್ಯಾಚಾರದಿಂದಾಗಿ ಅಪ್ರಾಪ್ತೆ ಗರ್ಭಿಣಿಯಾಗಿರುವ ವಿಚಾರ ತಿಳಿದ ನಂತರ ಮಕ್ಕಳ ಕಲ್ಯಾಣ ಸಮಿತಿ ಸಮಾಲೋಚನೆ ನಡೆಸಿ ಸಂತ್ರಸ್ತ ಬಾಲಕಿಯ ಗರ್ಭಪಾತಕ್ಕೆ ಶಿಫಾರಸು ಮಾಡಿತ್ತು. ಆದರೆ, ಬೆಳಗಾವಿ ಜಿಲ್ಲೆ ವೈದ್ಯಾಧಿಕಾರಿಗಳು ವೈದ್ಯಕೀಯ ಗರ್ಭಪಾತ ಕಾಯ್ದೆ 1971ರ ಸೆಕ್ಷನ್ 3ರ ಅಡಿ ಗರ್ಭ ಧರಿಸಿ 24 ವಾರಗಳು ಪೂರ್ಣಗೊಂಡಿದ್ದರೆ ಗರ್ಭಪಾತ ಮಾಡಲಾಗದು ಎಂದು ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್ ಮೊರೆ ಹೋಗಿದ್ದರು.
WP 104344/2021