ಸುದ್ದಿ

ಪತ್ನಿ ಕ್ರೌರ್ಯ; ವಿಚ್ಛೇದನ ಕೋರಿ ಪತಿ ಎರಡನೇ ಬಾರಿ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ: ಹೈಕೋರ್ಟ್

Share It

ಬೆಂಗಳೂರು: ಪತ್ನಿ ಮಾನಸಿಕ ಕಿರುಕುಳ ನೀಡಿದ ಆರೋಪದ ಆಧಾರದಲ್ಲಿ ಪತಿ ಮೊದಲ ಬಾರಿ ಸಲ್ಲಿಸಿದ್ದ ವಿವಾಹ ವಿಚ್ಛೇದನ ಅರ್ಜಿ ವಿಚಾರಣೆ ನಡೆಯದೇ (non-prosecution) ತಿರಸ್ಕೃತಗೊಂಡಿದ್ದಲ್ಲಿ, ಎರಡನೇ ಬಾರಿ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅಡ್ಡಿಯಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಮೊದಲ ವಿವಾಹ ವಿಚ್ಚೇದನ ಅರ್ಜಿ ತಿರಸ್ಕೃತಗೊಂಡ ನಂತರ ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಪತಿಯ ಕೋರಿಕೆಯಂತೆ ವಿಚ್ಛೇದನ ನೀಡಿದೆ. ಪತಿ ಸಲ್ಲಿಸಿದ್ದ ಮೇಲ್ಮನವಿ ಅಲಿಸಿದ ನ್ಯಾ. ಅನು ಶಿವರಾಮನ್ ಮತ್ತು ನ್ಯಾ. ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ದಾಖಲೆಗಳನ್ನು ಪರಿಶೀಲಿಸಿದರೆ ಪತ್ನಿಯು ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ದಾಖಲಿಸಿದ್ದಾರೆ. ಈ ದೂರಿನ ವಿಚಾರಣೆ ನಡೆಸಿದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇನ್ನು ಪತಿಯ ಅನೈತಿಕ ಸಂಬಂಧವನ್ನು ಪತ್ನಿ ಸಾಬೀತುಪಡಿಸಿಲ್ಲ. ಜತೆಗೆ ಪತಿಯ ಕಚೇರಿಗೆ ಹೋಗಿ ಅವರ ಸಹೋದ್ಯೋಗಿಗಳ ಮುಂದೆ ಹೀಯಾಳಿಸಿ ಮಾತನಾಡಿದ್ದಾರೆ. ಇದನ್ನು ಪತ್ನಿ ಪಾಟೀ ಸವಾಲಿನಲ್ಲಿ ನಿರಾಕರಿಸಿಲ್ಲ. ಇವನ್ನು ಪರಿಗಣಸಿದರೆ ಪತಿ ಪತ್ನಿಯಿಂದ ಮೌನಸಿಕ ಕ್ರೌರ್ಯ ಅನುಭವಿಸುತ್ತಿದ್ದಾನೆ ಎನ್ನುವ ವಾದದಲ್ಲಿ ಹುರುಳಿದೆ. ಆದ್ದರಿಂದ ಪತಿಯ ಕೋರಿಕೆಯಂತೆ ವಿಚ್ಛೇದನ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆ: 2007ರ ಜ.28ರಂದು ಮದುವೆಯಾಗಿದ್ದ ಮೈಸೂರಿನ ದಂಪತಿಗೆ 2010ರಲ್ಲಿ ಗಂಡು ಮಗು ಜನಿಸಿತ್ತು. ಆ ಬಳಿಕ ದಂಪತಿ ನಡುವಿನ ಸಂಬಂಧ ಹಳಸಿ, ಮಹಿಳೆಯು ತನ್ನ ಪತಿ ತವರು ಮನೆಯಿಂದ 3 ಲಕ್ಷ ರೂಪಾಯಿ ವರದಕ್ಷಿಣೆ ತರಲು ಕಿರಕುಳ ನೀಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪದಲ್ಲಿ ಹುರುಳಿಲ್ಲವೆಂದು ಬಿ ರಿಪೋರ್ಟ್ ಸಲ್ಲಿಸಿದ್ದರು.

ಮಗುವಿನ ಶೈಕ್ಷಣಿಕ ವಿಚಾರವಾಗಿಯೂ ದಂಪತಿ ನಡುವಿನ ವೈಮನಸ್ಯ ಉಂಟಾಗಿತ್ತು. ಪತಿ ಕುಡಿತಕ್ಕೆ ಶರಣಾಗಿದ್ದಾರೆಂದು ಪತ್ನಿ ಆರೋಪಿಸಿದ್ದರು. ಆ ಬಳಿಕ ಪತ್ನಿಯಿಂದ ಕಿರುಕುಳ ಅನುಭವಿಸುತ್ತಿದ್ದೇನೆಂದು ಆರೋಪಿಸಿದ್ದ ಪತಿ 2018ರಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಮೈಸೂರಿನ 3ನೇ ಕೌಟುಂಬಿಕ ನ್ಯಾಯಾಲಯಕ್ಕೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(ia) ಅಡಿ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ಮುನ್ನಡೆಸದೇ ಇದ್ದುದರಿಂದ ಅರ್ಜಿ ವಜಾಗೊಂಡಿತ್ತು.

2019ರಲ್ಲಿ ಪತಿ ಮತ್ತದೇ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ಹೊಸದಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಮೊದಲ ಅರ್ಜಿಯನ್ನು ಪುನರ್ಸ್ಥಾಪಿಸಲು ಅರ್ಜಿದಾರರು ಕೋರಿಲ್ಲ. ಕ್ರೌರ್ಯವನ್ನೂ ಸಾಬೀತುಪಡಿಸಿಲ್ಲ ಎಂದು ಎರಡನೇ ಅರ್ಜಿಯನ್ನು ವಜಾಗೊಳಿಸಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹಾಗೂ ವಿಚ್ಛೇದನ ಕೋರಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.


Share It

You cannot copy content of this page