ಬೆಂಗಳೂರು: ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012) ಪ್ರಕರಣದಲ್ಲಿ ಆರೋಪಿಯಾಗಿರುವ ಸಹಾಯಕ ಪ್ರಾಧ್ಯಾಪಕರೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣದಲ್ಲಿ ಸಾಕಷ್ಟು ಪುರಾವೆಗಳು ಲಭ್ಯವಿದ್ದರೆ, ಪ್ರಾಸಿಕ್ಯೂಷನ್ ವೈದ್ಯಕೀಯ ಪರೀಕ್ಷೆಯ ಕೊರತೆಯನ್ನು ಮುಂದು ಮಾಡಿ ಪ್ರಕರಣವನ್ನು ಅಮಾನ್ಯಗೊಳಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಎಂಟು ಅಪ್ರಾಪ್ತ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) 44 ವರ್ಷದ ಸಹಾಯಕ ಪ್ರಾಧ್ಯಾಪಕರೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ; ‘ಪೋಕ್ಸ್ ಕಾಯ್ದೆಯಡಿ ವಿಚಾರಣೆಗೆ ಅರ್ಹವಾದ ಒಂದೇ ಒಂದು ವಿಶ್ವಾಸಾರ್ಹ ವಿವರಣೆ ಇದ್ದರೂ ಸಾಕು ಪ್ರಕರಣವನ್ನು ನಿಃಸ್ಸಂಶಯವಾಗಿ ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬಹುದು’ ಎಂದು ಸ್ಪಷ್ಟಪಡಿಸಿದೆ.
ಆರೋಪಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿರುವ ನ್ಯಾಯಪೀಠ, ಪ್ರಕರಣದಲ್ಲಿ ಆರೋಪಿಯ ಅನುಚಿತ ವರ್ತನೆಯ ಬಗ್ಗೆ ಎಂಟು ಮಕ್ಕಳು ಏಕರೂಪದ ಹೇಳಿಕೆಗಳನ್ನು ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ‘ಈ ಹೇಳಿಕೆಗಳು ಇಡೀ ಪ್ರಕರಣದ ಪೂರ್ಣ ವಿಚಾರಣೆಯ ಅಗತ್ಯವನ್ನು ಒತ್ತಿಹೇಳುತ್ತದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಏನಿದು ಪ್ರಕರಣ?: ಆರೋಪ ಏದುರಿಸುತ್ತಿರುವ ಸಹಾಯಕ ಪ್ರಾಧ್ಯಾಪಕ ಮಗಳ ಹುಟ್ಟುಹಬ್ಬವನ್ನು ಅವರ ಮನೆಯಲ್ಲಿ 2018ರ ಸೆಪ್ಟೆಂಬರ್ 30ರಂದು
ಆಚರಿಸಲಾಗಿತ್ತು. ಅಂದು ನಡೆದ ಪಾರ್ಟಿಯಲ್ಲಿ ಕತ್ತಲೆ ಕೋಣೆಯಲ್ಲಿ ‘ಫೋಸ್ಟ್ ಹೌಸ್’ (ಭೂತದ ಮನೆ) ಆಟ ಆಯೋಜಿಸಲಾಗಿತ್ತು. ‘ಈ ಆಟ ಆಡುವಾಗ ಸಹಾಯಕ ಪ್ರಾಧ್ಯಾಪಕ 7ರಿಂದ 8 ಬಾಲಕಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿ ಓರ್ವ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದರು.