ಸುದ್ದಿ

ಸೌಲಭ್ಯ ಪಡೆಯಲು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವುದು ಶಿಕ್ಷಾರ್ಹ ಅಪರಾಧ: ಹೈಕೋರ್ಟ್

Share It

ಬೆಂಗಳೂರು: ಸೌಲಭ್ಯ ಪಡೆಯುವ ಸಲುವಾಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವುದು ಶಿಕ್ಷಾರ್ಹ ಅಪರಾಧ ಎಂದಿರುವ ಕರ್ನಾಟಕ ಹೈಕೋರ್ಟ್, ‘ಆದಿ ದ್ರಾವಿಡ’ ಎಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪದ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪ ಮುಕ್ತಿ ಕೋರಿ ಕ್ರಿಶ್ಚಿಯನ್ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ವಜಾಗೊಳಿಸಿ ಆದೇಶಿಸಿದೆ.

ಬೆಂಗಳೂರಿನ ನಾಗೇನಹಳ್ಳಿಯ ಸಿ ಸುಮಲತಾ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.

ಈ ಪ್ರಕರಣದಲ್ಲಿ ಸುಮಲತಾ ಅವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅದರ ಆಧಾರದ ಮೇಲೆ ಸಾಹೀರಾ ಬಾನು ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸಮಲತಾ ಅರ್ಹರಾಗಿಲ್ಲ ಮತ್ತು ಕಾಯಿದೆಯ ನಿಬಂಧನೆಯನ್ನು ದುರ್ಬಳಕೆ ಮಾಡಿದ್ದಾರೆ.

ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಸೌಲಭ್ಯ ಪಡೆಯುವ ಯತ್ನವೂ ಶಿಕ್ಷಾರ್ಹ ಅಪರಾಧವಾಗಿದೆ. ಹಾಲಿ ಈ ಪ್ರಕರಣದಲ್ಲಿ ಸುಮಲತಾ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಮೇಲ್ನೋಟಕ್ಕೆ ಪೂರಕ ದಾಖಲೆಗಳು ಇವೆ. ಈ ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯವು ಸುಮಲತಾ ಅವರ ಆರೋಪ ಮುಕ್ತಿ ಕೋರಿರುವ ಅರ್ಜಿ ವಜಾಗೊಳಿಸಿರುವುದು ಸರಿಯಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸುಮಲತಾ ಪರ ವಕೀಲ ವಿಜಯಕುಮಾ‌ರ್ ಪ್ರಕಾಶ್ ಅವರು “ಡಿಸಿಆರ್‌ಇಗಳು ಪೊಲೀಸ್ ಠಾಣೆಯಲ್ಲ. ಹೀಗಾಗಿ, ಅವರು ಸಲ್ಲಿಸಿರುವ ಆರೋಪ ಪಟ್ಟಿಯು ಊರ್ಜಿತವಾಗುವುದಿಲ್ಲ. ಕಾಯಿದೆ ಸೆಕ್ಷನ್ 2(e)(c) ಅಡಿ ಸಂತ್ರಸ್ತರು ಎಸ್‌ಸಿ/ಎಸ್‌ಟಿ ಜಾತಿಗೆ ಸೇರಿರಬೇಕು. ಆದರೆ, ದೂರುದಾರೆಯು ಸಂತ್ರಸ್ತರ ವ್ಯಾಪ್ತಿಗೆ ಬಾರದೇ ಇರುವುದರಿಂದ ಆರೋಪ ಪಟ್ಟಿ ಊರ್ಜಿತವಾಗುವುದಿಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಸುಮಲತಾ ಅವರು ಒತ್ತುವರಿ ಮಾಡಿ, ನಾಲ್ಕು ಅಂತಸ್ತಿನ ಕಟ್ಟಡವನ್ನು ಪರವಾನಗಿ ಪಡೆಯದೇ ಮತ್ತು ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಒಪ್ಪಿಗೆ ಪತ್ರ ಪಡೆಯದೆ ನಿರ್ಮಿಸಿದ್ದಾರೆ ಎಂದು ಸಾಹೀರಾ ಬಾನು ದೂರು ನೀಡಿದ್ದರು. ಅದರಂತೆ ಸಾಹೀರಾ ಬಾನು ದೂರು ಆಧರಿಸಿ ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿ ಆದೇಶ ಮಾಡಿತ್ತು. ಇದನ್ನು ಸಹಿಸದೇ ಸಾಹೀರಾ ಬಾನು ಮತ್ತು ಅವರ ಸಹೋದರ ನೂ‌ರ್ ಮೊಹಮ್ಮದ್ ಅಲಿ ಅವರ ಮೇಲೆ ಗೂಂಡಾಗಳ ಮೂಲಕ ಸುಮಲತಾ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು.

ಇದರಿಂದ ಕೆರಳಿದ ಸಾಹೀರಾ ಬಾನು ಅವರು ಸುಮಲತಾ ಅವರು ಜನ್ಮತಃ ಹಿಂದೂ ಆಗಿದ್ದು, ಬಾಲ್ಯದಲ್ಲಿಯೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬ್ಯಾಪ್ಟಿಸ್ಟ್ ಪಂತಕ್ಕೆ ಸೇರಿದ ಆಕೆಯು ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯನ್ನು ವರಿಸಿರುವುದರಿಂದ ಆಕೆ ಪರಿಶಿಷ್ಟ ಜಾತಿಗೆ ಸೇರಿಲ್ಲ. ಅದಾಗ್ಯೂ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ್ದಾಗಿ ನಕಲಿ ದಾಖಲಿಸಿ, ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಸುಮಲತಾ ನಕಲಿ ಜಾತಿ ಪ್ರಮಾಣ ಪತ್ರ ಮಾತ್ರ ಪಡೆದಿಲ್ಲ. ಅದನ್ನು ಆಧರಿಸಿ ತನ್ನ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 504, 506 ಜೊತೆಗೆ 34 ಹಾಗೂ ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಟ ಪಂಗಡ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್ 3(1)(r) ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶಕರಿಗೆ (ಡಿಸಿಆರ್‌ಇ) ದೂರಿದ್ದರು. ಇದರ ಬೆನ್ನಿಗೇ ಸುಮಲತಾ ಅವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ವಿಚಾರ ಬೆಳಕಿಗೆ ಬಂದಿತ್ತು.

ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಗಳ ಮೀಸಲಾತಿ ಇತ್ಯಾದಿ) ನಿಯಮಗಳ ನಿಯಮ 7-A (2) ಅಡಿ ಜಾತಿ ಪ್ರಮಾಣ ಪತ್ರ ಕೋರಿ ತಿರಸ್ಕೃತವಾದ ಬಳಿಕ ಅಥವಾ ಜಾತಿ ಪ್ರಮಾಣ ಪತ್ರ ರದ್ದಾದ ನಂತರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕು.ಅದರ ಅನ್ವಯ ಸುಮಲತಾ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 196, 198 ಮತ್ತು 420 ಹಾಗೂ ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್ 3(1)(q) ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಲಾಗಿತ್ತು.


Share It

You cannot copy content of this page