ಸುದ್ದಿ

ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ವಿಧಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಎತ್ತಿ ಹಿಡಿದ ಹೈಕೋರ್ಟ್

Share It

ಬೆಂಗಳೂರು: ಮೋಟಾರು ವಾಹನ ಕಾಯಿದೆ ಅಡಿ ರಾಜ್ಯ ಸರ್ಕಾರವು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವವರೆಗೆ ಓಲಾ, ರ್ಯಾಪಿಡೊ ಮತ್ತು ಉಬರ್ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವಂತಿಲ್ಲ ಎಂದು ಏಕಸದಸ್ಯ ಪೀಠ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.

ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಗೆ ನಿರ್ದೇಶನ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾ‌ರ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ನಿಯಮ ರೂಪಿಸಲಾಗುತ್ತಿದ್ದು, ತಡವಾಗಲಿದೆ ಎಂದು ಸರ್ಕಾರ ಹೇಳಿದ್ದರೆ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬಹುದಿತ್ತು. ಆದರೆ, ಬೈಕ್ ಟ್ಯಾಕ್ಸಿಗೆ ಅನುಮತಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ನೀತಿಯ ಭಾಗವಾಗಿ ಕ್ರಮಕೈಗೊಂಡಿದೆ. ಹೀಗಾಗಿ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.

ದ್ವಿಚಕ್ರ ವಾಹವನ್ನು ಸಾರಿಗೆ ವಾಹನವನ್ನಾಗಿ ಬಳಕೆ ಮಾಡಬಹುದು ಎಂದು ಕೇಂದ್ರ ಸರ್ಕಾರವೇ ಹೇಳಿದೆ. ರಾಜ್ಯ ಸರ್ಕಾರವು ನಿಯಮ ರೂಪಿಸಿರುವುದರಿಂದ ನಾಲ್ಕು ಚಕ್ರ ವಾಹನಗಳು ಟ್ಯಾಕ್ಸಿ ಸೇವೆ ನೀಡುತ್ತಿವೆ. ಇದು ದ್ವಿಚಕ್ರ ವಾಹನಗಳಿಗೂ ಅನ್ವಯಿಸುತ್ತದೆ. ಮೋಟಾರು ವಾಹನ ಕಾಯಿದೆಯಡಿ ಆರು ಜನರಿಗಿಂತ ಕಡಿಮೆ ಪ್ರಯಾಣಿಕರನ್ನು ಕರೆದೊಯ್ಯುವ ಎಲ್ಲವೂ ಮೋಟಾರ್ ಕ್ಯಾಬ್ ಎಂದು ಪರಿಗಣಿಸಲ್ಪಡಲಿದ್ದು, ದ್ವಿಚಕ್ರ ವಾಹನವೂ ಮೋಟಾರ್ ಕ್ಯಾಬ್ ಎಂದು ಪರಿಗಣಿತವಾಗುತ್ತದೆ ಎಂದು ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ವಾದಿಸಿದರು.

ಇದಕ್ಕೆ ಪ್ರತಿವಾದಿಸಿದ ಅಡ್ವಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಹಾಗಾದರೆ ಇದರಡಿ ಟ್ರಕ್ ಅನ್ನು ತರಬಹುದು ಎಂದಾಗುತ್ತದೆ ಅಲ್ಲವೇ” ಎಂದರು. ಅಲ್ಲದೇ, ಮಧ್ಯಂತರ ಪರಿಹಾರಕ್ಕೆ ವಿರೋಧಿಸಿದರು.

ಇದಕ್ಕೆ ವಕೀಲ ಧ್ಯಾನ್ ಚಿನ್ನಪ್ಪ ಅವರು “ಮುಂದಿನ ವಿಚಾರಣೆವರೆಗೆ ತಡೆ ನೀಡಬೇಕು” ಎಂದರು. ಇದಕ್ಕೆ ನಿರಾಕರಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಿತು.


Share It

You cannot copy content of this page