ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಯು ನಿತ್ಯ ಓಡಾಡುವ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಅನುಕೂಲಕರವಾಗಿದ್ದು, ಕೈಗೆಟುಕುವ ಪ್ರಯಾಣ ಸಾಧನವಾಗಿದೆ’ ಎಂದು ಮಹಿಳಾ ಪ್ರಯಾಣಿಕರು ಹಾಗೂ ಚಾಲಕಿಯರ ಪರ ವಕೀಲರು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.
ಬೈಕ್ ಟ್ಯಾಕ್ಸಿ ಸೇವೆಯನ್ನು ರಾಜ್ಯದಲ್ಲಿ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ, ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್’, ‘ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ರಾಪಿಡೊ)’ ಮತ್ತು ‘ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಓಲಾ)’ ಕಂಪನಿಗಳು ಸಲ್ಲಿಸಿರುವ ರಿಟ್ ಮೇಲ್ಮನವಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮಹಿಳಾ ಪ್ರಯಾಣಿಕರು ಮತ್ತು ಚಾಲಕಿಯರ ಪರ ಸಲ್ಲಿಸಲಾದ ಮಧ್ಯಂತರ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲೆ ಜಯನಾ ಕೊಠಾರಿ ವಾದ ಮಂಡಿಸಿ, ‘ಮಹಿಳೆಯರಿಗೆ ಈ ಸೇವೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಅಂಚಿನವರೆಗೆ ಸಂಪರ್ಕ ಕಲ್ಪಿಸುವ ಯಾವುದೇ ಸಾರಿಗೆ ಸೇವೆಗಳು ವಿರಳವಾಗಿವೆ. ಜಪಾನ್‌ನಂತಹ ದೇಶಗಳಲ್ಲಿ ಹಲವು ಮೆಟ್ರೊ ಮಾರ್ಗಗಳಿವೆ. ಆದರೆ, ಬೆಂಗಳೂರು ಮಹಾನಗರದ ಪರಿಸ್ಥಿತಿ ಬೇರೆಯದೇ ಆಗಿದ್ದು, ಹಲವು ಮೆಟ್ರೊ ಮಾರ್ಗ ರೂಪಿಸಿದರೂ ಸಂಪರ್ಕ ಅಸಾಧ್ಯ ಎನ್ನುವಂತಿದೆ’ ಎಂದು ವಿವರಿಸಿದರು.
ಕ್ಯಾಪಿಡೊ ಕಂಪನಿ ಪರ ಹೈಕೋರ್ಟ್ ವಕೀಲ ಎ.ವಿ.ನಿಶಾಂತ್ ವಕಾಲತ್ತು ವಹಿಸಿದ್ದಾರೆ. ಓಲಾ, ಉಬರ್ ಮತ್ತು ರಾಜ್ಯ ಸರ್ಕಾರದ ಪರ ವಾದ ಆಲಿಸಬೇಕಿರುವ ನ್ಯಾಯಪೀಠ ವಿಚಾರಣೆಯನ್ನು ಇದೇ 4ಕ್ಕೆ ಮುಂದೂಡಿದೆ.
ಮೋಟಾರು ವಾಹನ ಕಾಯ್ದೆ-1988ರ ಕಲಂ 93ರ ಅನುಸಾರ ರಾಜ್ಯ ಸರ್ಕಾರ ಸೂಕ್ತ ಮಾರ್ಗಸೂಚಿ ಹೊರಡಿಸುವವರೆಗೆ ಸಂಬಂಧಿತ ಸಂಸ್ಥೆಗಳಾದ ಓಲಾ, ಉಬರ್ ಮತ್ತು ರಾಪಿಡೊಗಳು ತಮ್ಮ ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು.