ಕೊಡಗು: ವಿರಾಜಪೇಟೆ ತಾಲ್ಲೂಕಿನ
ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ಆಲ್ಟೋ ಕಾರಿನಲ್ಲಿ ಪ್ರಯಾಣಿಸುವಾಗ ಶುಕ್ರವಾರ ಸಂಜೆ 4 ರ ಸುಮಾರಿನಲ್ಲಿ ಬೂದಿತಿಟ್ಟು ಬಳಿ ಹೃದಯಾಘಾತದಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ ಮನಮೋಹನ್ (46) ನಿಧನರಾಗಿದ್ದಾರೆ.
ಮೂಲತಃ ಬೆಂಗಳೂರಿನವರಾಗಿದ್ದ ಮನಮೋಹನ್ ಅವರು ವೀರಾಜಪೇಟೆ ಸಮೀಪದ ತಿತಿಮಿತಿಯಲ್ಲಿ ಕುಟುಂಬ ಸಹಿತ ವಾಸಿಸುತ್ತಿದ್ದರು. ಪೊನ್ನಪ್ಪ ಸಂತೆ, ನಿಟ್ಟೂರು, ಬಾಳೆಲೆ, ಸೋಮವಾರಪೇಟೆ, ಸಿದ್ದಾಪುರದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಪ್ರಭಾರ ಯೋಜನಾಧಿಕಾರಿಯಾಗಿದ್ದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನ ಚಾಲನೆಯಲ್ಲಿರುವಾಗಲೇ ಹೃದಯಾಘಾತವಾಗಿ ಸಾವನಪ್ಪಿದ್ದಾರೆ ತಿಳಿದು ಬಂದಿದೆ.