ನವದೆಹಲಿ: ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುವ ಸಿಸಿಟಿವಿಗಳ ಕೊರತೆ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಮಾನವಹಕ್ಕುಗಳ ಉಲ್ಲಂಘನೆ ಪರಿಶೀಲಿಸಲು ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸುವಂತೆ ಸುಪ್ರೀಂ ಕೋರ್ಟ್ 2018ರಲ್ಲಿ ಆದೇಶಿಸಿತ್ತು. ಗುರುವಾರ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರ ನ್ಯಾಯಪೀಠವು ಮಾಧ್ಯಮ ವರದಿಯನ್ನು ಉಲ್ಲೇಖಿಸಿ, ಈ ವರ್ಷದ ಕೊನೆಯ ಏಳು-ಎಂಟು ತಿಂಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸುಮಾರು 11 ಸಾವುಗಳು ಸಂಭವಿಸಿವೆ ಎಂದು ವರದಿಯಾಗಿರುವುದರಿಂದ ನಾವು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುವ ಸಿಸಿಟಿವಿಗಳ ಕೊರತೆ ಬಗ್ಗೆ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ನೋಂದಾಯಿಸಿಕೊಳ್ಳುತ್ತಿದ್ದೇವೆ ಎಂದಿದೆ.
2020ರ ಡಿಸೆಂಬರ್‌ನಲ್ಲಿ ಸಿಬಿಐ, ಇಡಿ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೇರಿದಂತೆ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ರೆಕಾರ್ಡಿಂಗ್ ಉಪಕರಣಗಳನ್ನು ಸ್ಥಾಪಿಸುವಂತೆ ಸುಪ್ರೀಂ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ಪೊಲೀಸ್ ಠಾಣೆಯಲ್ಲಿಯೂ, ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳು, ಮುಖ್ಯದ್ವಾರ, ಲಾಕ್-ಅಪ್ ಕಾರಿಡಾರ್‌ಗಳು, ಲಾಬಿ ಮತ್ತು ಸ್ವಾಗತ ಮತ್ತು ಲಾಕ್-ಅಪ್ ಕೊಠಡಿಗಳ ಹೊರಗಿನ ಪ್ರದೇಶಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು.