ಬೆಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಮೆಡಿಕ್ ಸೈನ್ಸ್ ಅಂಡ್ ರೀಸರ್ಚ್ ಸಂಸ್ಥೆಗೆ ಪರವಾಗಿ ತಪಾಸಣಾ ವರದಿ ನೀಡಲು ಲಂಚ ಸ್ವೀಕರಿಸಿದ ಆರೋಪವು ಸಿಬಿಐ ತನಿಖೆಯಲ್ಲಿ ಧೃಡಪಟ್ಟಿದ್ದರಿಂದ ಮೂವರು ಹಿರಿಯ ವೈದ್ಯರುಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಅಮಾನತುಗೊಳಿಸಿ ಆದೇಶಿಸಿದೆ.
ಭಾರತೀಯ ವೈದ್ಯಕೀಯ ಆಯೋಗದ ಪರಿವೀಕ್ಷಕರ ತಂಡದಲ್ಲಿ ನಿಯೋಜಿತರಾಗಿದ್ದ ಬೆಂಗಳೂರು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶರೀರ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಚೈತ್ರ ಎಂ.ಎಸ್, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೂಳೆ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಮಂಜಪ್ಪ ಸಿ.ಎನ್, ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶೋಕ್ ಸೆಲ್ಕೆ ಅವರನ್ನು ಅಮಾನತುಗೊಳಿಸಿ ಇಲಾಖೆಯ ಪ್ರಧಾನ,
ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಸೀನ್ ಆದೇಶ ಹೊರಡಿಸಿದ್ದಾರೆ.
ಲಂಚ ಸ್ವೀಕಾರ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಬಿಐ ಈಗಾಗಲೇ ಎಫ್‌ಐಆರ್ ದಾಖಲಿಸಿರುವ ಬಗ್ಗೆ ರಾಜ್ಯ ಸರಕಾರಕ್ಕೆ ವರದಿ ಮಾಡಿದೆ.