ನೆಲಮಂಗಲ: ಚಲಿಸುತ್ತಿದ್ದ ರಾಜಹಂಸ ಸಾರಿಗೆ ಬಸ್ ಚಾಲಕನಿಗೆ ಹೃದಯಾಘಾತವಾಗಿದ್ದು ಆತನ ಸಮಯ ಪ್ರಜ್ಞೆ ಹಾಗೂ ಹೃದಯವಂತಿಕೆಯಿಂದ 45ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿ ಚಾಲಕ ಪ್ರಾಣ ಬಿಟ್ಟ ದಾರುಣ ಘಟನೆ ನೆಲಮಂಗಲ ಸಮೀಪದ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರಾಜೀವ್ ಬಿರಾದಾರ್ (50) ಹೃದಯಾಘಾತದಿಂದ ಮೃತಪಟ್ಟ ಚಾಲಕ. ಇವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಸುಮಾರು 20 ವರ್ಷಗಳಿಂದ ಕೆಎಸ್‌ಆರ್‌ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಂಗಳವಾರ ಬೆಂಗಳೂರು ಮೆಜೆಸ್ಟಿಕ್‌ನಿಂದ ದಾವಣಗೆರೆಯ ಹರಿಹರಕ್ಕೆ ನೆಲಮಂಗಲ ಮಾರ್ಗವಾಗಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ನೆಲಮಂಗಲ ಸಮೀಪದ ಜಾಸ್ ಟೋಲ್ ಬಳಿ ಚಾಲಕ ರಾಜೀವ್ ಬಿರಾದಾರ್‌ಗೆ ಹೃದಯಾಘಾತವಾಗಿದೆ, ತಕ್ಷಣ ಚಾಲಕ ಬಸ್ ಅನ್ನು ಹೆದ್ದಾರಿಯಲ್ಲಿನ ಎಡಭಾಗಕ್ಕೆ ತೆಗೆದುಕೊಂಡು ನಿಲ್ಲಿಸಿದ್ದಾನೆ. ತಕ್ಷಣ ಪ್ರಯಾಣಿಕರು 108ಕ್ಕೆ ಕರೆ ಮಾಡಿ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿದ್ದು ಆ್ಯಂಬುಲೆನ್ಸ್‌ನಲ್ಲಿ ಪ್ರಥಮ ಚಿಕಿತ್ಸೆ ಸಿಗದೆ ಮಾರ್ಗ ಮಧ್ಯೆ ರಾಜೀವ್ ಬಿರಾದಾರ್ ಮೃತಪಟ್ಟಿದ್ದಾರೆ.
ಚಾಲಕ ರಾಜೀವ್ ಬಿರಾದಾರ್ ಹೃದಯಾಘಾತವಾಗಿದ್ದುರು ಸಮಯ ಪ್ರಜ್ಞೆ ಹಾಗೂ ಮಾನವೀಯತೆಯಿಂದ 45ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರುಮಾಡಿ ಸಾರ್ಥಕತೆ ಮೆರೆದಿದ್ದಾರೆ. ಈ ಕುರಿತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ, ಚಾಲಕನ ಸಾವಿಗೆ ಕಂಬನಿ ಮಿಡಿದಿದ್ದಾರೆ.