ನವದೆಹಲಿ: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತು.
ಬೆಂಗಳೂರಿನ ಎಚ್.ಎಸ್.ಗೌರವ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಸಂದೀಪ್ ಮೆಹ್ತಾ ಪೀಠವು ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಅರ್ಜಿದಾರರ ಪರ ವಕೀಲರು ವಾದ ಆರಂಭಿಸುತ್ತಿದ್ದಂತೆಯೇ. ನ್ಯಾಯಮೂರ್ತಿ ವಿಕ್ರಮ್‌ನಾಥ್ ಅವರು ಹೈಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿದರು. ‘2017ರ ದಸರಾ ಉದ್ಘಾಟನೆಗೆ ಸಾಹಿತಿ ನಿಸಾರ್ ಅಹಮದ್ ಅವರನ್ನು ಆಹ್ವಾನಿಸಲಾ ಗಿತ್ತು. ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ್ದನ್ನು ವಿರೋಧಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರ ಪೈಕಿ ಒಬ್ಬರು ಆಗ ನಿಸಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇದು ಸರಿಯೇ ಅಥವಾ ಅಲ್ಲವೇ’ ಎಂದು ಪ್ರಶ್ನಿಸಿದರು.
ನೀವು ಅರ್ಜಿ ಸಲ್ಲಿಸಿದ್ದು ಏಕೆ? ಯಾವ ಆಧಾರದಲ್ಲಿ ಅರ್ಜಿ ಸಲ್ಲಿಸಿದ್ದೀರಿ ಎಂದು ಪೀಠ ಪ್ರಶ್ನಿಸಿತು. ರಾಜ್ಯ ಸರ್ಕಾರದ ಈ ನಿರ್ಧಾರ ಸಂವಿಧಾನದ 25ನೇ ವಿಧಿಯಲ್ಲಿನ ಅರ್ಜಿದಾರರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಕೀಲರು ಹೇಳಿದರು.
2017ರಲ್ಲಿ ಅರ್ಜಿದಾರರ ಹಕ್ಕಿನ ಮೇಲೆ ಪರಿಣಾಮ ಬೀರಿಲ್ಲವೇ ಎಂದು ಪೀಠ ಪ್ರಶ್ನಿಸಿತು. ಇದು ರಾಜ್ಯ ಸರ್ಕಾರದ ಕಾರ್ಯಕ್ರಮ ಎಂದು ಪೀಠ ಹೇಳಿತು.
ಸುಪ್ರೀಂಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದ ವಕೀಲರು, ‘ಅವರು ನನ್ನ ಧಾರ್ಮಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು. ದೇವಸ್ಥಾನದ ಆವರಣ ದೊಳಗಿನ ಚಟುವಟಿಕೆಗಳನ್ನು ಉಲ್ಲೇಖಿಸಿದರು.
ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ವಿಕ್ರಮ್‌ನಾಥ್ ಅವರು ಒತ್ತಿ ಹೇಳಿದರು.
ಲೇಖಕಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ಸೆಪ್ಟೆಂಬರ್ 15ರಂದು ವಜಾಗೊಳಿಸಿತ್ತು.