ಬೆಂಗಳೂರು: ರಾಜ್ಯದಲ್ಲಿ 15 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿಯಿದ್ದು ಶೀಘ್ರದಲ್ಲಿಯೇ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ 10 ರಿಂದ 15 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿಯಿವೆ. ಕೆಎಸ್ ಆರ್ ಪಿ, ಸಿವಿಲ್, ಸಶಸ್ತ್ರ ಮೀಸಲು ಪಡೆಗೆ ನೇಮಕಾತಿಯಾಗಬೇಕು. ಯಾವ ರೀತಿ ನೇಮಕಾತಿ ನಡೆಯಬೇಕೆಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ಕೊಟ್ಟಿದ್ದೇನೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿ ನಡೆಯುತ್ತಿದೆ. 545 ಮಂದಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪೂರ್ಣಗೊಂಡಿದೆ. ಆಯ್ಕೆಯಾದ ಪಿಎಸ್‌ಐಗಳಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಅವರೆಲ್ಲಾ ತರಬೇತಿಗೆ ಹೋಗಿದ್ದಾರೆ. ಇನ್ನೂ 402 ಪಿಎಸ್‌ಐ ಹುದ್ದೆಗಳ ನೇಮಕಾತಿ ಬಾಕಿಯಿದ್ದು, ಈ ಪೈಕಿ 398 ಹುದ್ದೆಗೆ ಆದೇಶ ನೀಡಲಾಗಿದೆ ಎಂದು ವಿವರಿಸಿದರು.