ತುಮಕೂರು: ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ನ್ಯಾಷನಲ್ ಮೀನ್ಸ್ ಕಂ ಮೆರಿಟ್ ವಿದ್ಯಾರ್ಥಿ ವೇತನ (ಎನ್‌ಎಂಎಂಎಸ್) ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಪರೀಕ್ಷೆಯು ಡಿಸೆಂಬರ್ 7ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ, ಇಂಗ್ಲೀಷ್, ಉರ್ದು, ಮರಾಠಿ ಮತ್ತು ತೆಲುಗು ಭಾಷೆಯಲ್ಲಿ ನಡೆಯಲಿದೆ. ವಸತಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ 9 ರಿಂದ 12ನೇ ತರಗತಿಯವರಗೆ ಮಾಸಿಕ 1,000 ರೂ.ಗಳ ವಿದ್ಯಾರ್ಥಿ ವೇತನ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 3.50ಲಕ್ಷ ರೂ.ಗಳೊಳಗಿರಬೇಕು. ಸಾಮಾನ್ಯ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು 7ನೇ ತರಗತಿಯಲ್ಲಿ ಶೇ.55ಕ್ಕಿಂತ ಹೆಚ್ಚು ಅಂಕ ಹಾಗೂ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಶೇ. 50ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.
ಆಸಕ್ತರು ಅಕ್ಟೋಬರ್ 15ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ಎಸ್.ಸಿ. ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.