ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಕೆ.ಆರ್.ನಗರದ ಸಂತ್ರಸ್ತೆಯ ಅಪಹರಣ ಪ್ರಕರಣದ ಆರೋಪದಿಂದ ತಮ್ಮನ್ನು ಕೈ ಬಿಡುವಂತೆ ಕೋರಿ ಆರೋಪಿಗಳಾದ ಭವಾನಿ ರೇವಣ್ಣ ಮತ್ತು ಕೆ.ಎ.ರಾಜಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ 7ನೇ ಆರೋಪಿ ಕೆ.ಎ.ರಾಜಗೋಪಾಲ್ ಮತ್ತು 8ನೇ ಆರೋಪಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ಸಂಬಂಧ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು ಸೋಮವಾರ ವಿಚಾರಣೆ ನಡೆಸಿ ಇಬ್ಬರು ಆರೋಪಿಗಳ ಅರ್ಜಿ ವಜಾಗೊಳಿಸಿ ಆದೇಶಿಸಿದರು.
ಕೆ.ಆರ್.ನಗರದ ಅತ್ಯಾಚಾರ ಸಂತ್ರಸ್ತೆಯ ಅಪಹರಣ ಸಂಬಂಧ ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ ಮೇರೆಗೆ 2024ರ ಮೇ 2ರಂದು ಕೆ.ಆರ್.ನಗರ ಪೊಲೀಸ್ ಠಾಣೆ ಪೊಲೀಸರು ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಕೆ.ಎ.ರಾಜಗೋಪಾಲ್ ಸೇರಿ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣ ಎಸ್‌ಐಟಿಗೆ ವರ್ಗಾವಣೆಯಾಗಿತ್ತು. ಪ್ರಕರಣದ 8ನೇ ಆರೋಪಿಯಾಗಿದ್ದ ಭವಾನಿ ರೇವಣ್ಣ ಅವರು ಬಂಧನ ಭೀತಿಯಿಂದ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.