ಬೆಂಗಳೂರು: ನೆಟ್‌ವರ್ಕ್ 18ನ ಕನ್ನಡ ಯೂಟ್ಯೂಬ್ ವಿಭಾಗದಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಶ್ರೇಯಸ್. ಆರ್ (42) ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾನುವಾರ ಹೃದಯಾಘಾತವಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಶ್ರೇಯಸ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಶ್ರೇಯಸ್ ಪತ್ನಿ ಹಾಗೂ 9 ವರ್ಷದ ಮಗುವನ್ನ ಅಗಲಿದ್ದಾರೆ.
ಶ್ರೇಯಸ್ ಅವರು ಕನ್ನಡದ ನಟ ದಿವಂಗತ ನವೀನ್ ಮಯೂರ್ ಅವರ ಸಹೋದರ. 2010ರಲ್ಲಿ ನಟ ನವೀನ್ ಮಯೂರ್ ಅವರು ನಿಧನರಾಗಿದ್ದರು. ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ‘ಸ್ಪರ್ಶ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನವೀನ್ ಮಯೂರ್ ಅವರು ಸ್ಪರ್ಶ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೇರಿಕಾ ಅಮೇರಿಕಾ ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದ್ದರು.