ಕೊಪ್ಪಳ: ಕುಕನೂರು ಕೌಟುಂಬಿಕ ಜಗಳದ ಸಂಬಂಧ ಠಾಣೆಗೆ ದೂರು ನೀಡಲು ಬಂದವರ ಮೇಲೆಯೇ ಹಲ್ಲೆ ಮಾಡಿರುವ ಜಿಲ್ಲೆಯ ಕುಕನೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಗುರುರಾಜ್ ಟಿ. ಅವರನ್ನು ಅಮಾನತು ಮಾಡಲಾಗಿದೆ.
ಕೊಪ್ಪಳ ತಾಲ್ಲೂಕಿನ ಯಲಮಗೇರಿಯ ಗಾಳೆಪ್ಪ ಹಿರೇಮನಿ ಎಂಬುವವರೇ ಕುಕನೂರು ಪಿಎಸ್‌ಐ ಗುರುರಾಜ್ ಟಿ ಅವರಿಂದ ಹಲ್ಲೆಗೊಳಗಾಗಿದ್ದಾರೆ. ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಪಿಎಸ್ಐ ಅವರು ಗಾಳೆಪ್ಪ ಹಿರೇಮನಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿರುವ ಎಸ್.ಪಿ. ಅರಸಿದ್ದಿ ‘ಸಾರ್ವಜನಿಕರು ದೂರು ನೀಡಲು ಬಂದಾಗ ಅವರೊಂದಿಗೆ ಸೌಜನ್ಯದೊಂದಿಗೆ ವರ್ತಿಸಬೇಕಿತ್ತು. ಸಿಟ್ಟಿನ ಭರದಲ್ಲಿ ದೂರುದಾರ ಗಾಳೆಪ್ಪ ಅವರನ್ನು ತಳ್ಳಾಡಿ ಹೊಡೆದು ಅನುಚಿತವಾಗಿ ನಡೆದುಕೊಂಡಿದ್ದು ಸರಿಯಲ್ಲ. ಆದ್ದರಿಂದ ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.