ಬೆಂಗಳೂರು: ಜೀವ ಉಳಿಸಬೇಕಾದ ವೈದ್ಯನೇ ಪತ್ನಿಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದಿದೆ. ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿಯನ್ನು ಕೊಂದು ಕುಟುಂಬಸ್ಥರಿಗೆ ಸಹಜ ಸಾವು ಎಂದು ಕಥೆ ಕಟ್ಟಿದ್ದ ಖತರ್ನಾಕ್ ವೈದ್ಯನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ವೃತ್ತಿಯಲ್ಲಿ ಜನರಲ್ ಸರ್ಜನ್ ಆಗಿರುವ ಡಾ.ಮಹೇಂದ್ರರೆಡ್ಡಿ ಬಂಧಿತ ಆರೋಪಿಯಾಗಿದ್ದು, ಪತ್ನಿಗೆ ಅನಾರೋಗ್ಯ ಸಮಸ್ಯೆ ಇರುವ ಕಾರಣ ಈತ ಕೊಲೆ ಮಾಡಿದ್ದಾನೆ ಎಂಬ ಆಘಾತಕಾರಿ ವಿಷಯ ತನಿಖೆ ವೇಳೆ ಗೊತ್ತಾಗಿದೆ.
2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ವಿವಾಹವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ ಅವರಿಗೆ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಾಗಿತ್ತು. ಅಜೀರ್ಣ, ಗ್ಯಾಸ್ಟಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರರೆಡ್ಡಿಗೆ ಮದುವೆ ಮಾಡಿಕೊಟ್ಟಿದ್ದರು.
ಆದರೆ, ಮದುವೆ ಬಳಿಕ ಹೆಂಡತಿಯ ಆರೋಗ್ಯ ಸಮಸ್ಯೆ ವಿಷಯ ಪತಿ ಮಹೇಂದ್ರ ರೆಡ್ಡಿಗೆ ಗೊತ್ತಾಗಿತ್ತು. ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನ ಮಹೇಂದ್ರರೆಡ್ಡಿ ಇಂಜೆಕ್ಷನ್ ನೀಡಿ ಕೊಂದಿದ್ದ. ಆದರೆ ಅದನ್ನು ಸಹಜ ಸಾವು ಎಂದು ಕುಟುಂಬದವರಿಗೆ ನಂಬಿಸಿದ್ದ ಎನ್ನಲಾಗಿದೆ.
ಕೃತಿಕಾ ಸಾವಿನ ಸಂಬಂಧ ಆಕೆಯ ತಂದೆ ಮುನಿರೆಡ್ಡಿ ಎಂಬುವರು ನನ್ನ ಅಳಿಯನೇ ಮಗಳನ್ನು ಕೊಂದಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಮದುವೆಯಾದ ಬಳಿಕ ಅಳಿಯ ಮಹೇಂದ್ರ ನನ್ನ ಮಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದ ಎಂದು ದೂರುದಾರರು ಆರೋಪಿಸಿದ್ದಾರೆ.
ಪತ್ನಿಗೆ ಅರವಳಿಕೆ ಇಂಜೆಕ್ಷನ್, ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ರಹಸ್ಯ ಬಯಲು:
ಏಪ್ರಿಲ್ 21, 2025 ರಂದು, ಆರೋಪಿ ಮಹೇಂದ್ರ, ಪತ್ನಿ ಕೃತಿಕಾಗೆ ಮನೆಯಲ್ಲಿ ಇಂಟ್ರಾವೆನಸ್ (IV) ಔಷಧಿಯನ್ನು ನೀಡಿ, ಅದು ಹೊಟ್ಟೆಯ ಅಸ್ವಸ್ಥತೆಗೆ ಎಂದು ಹೇಳಿದ್ದ. ಮರುದಿನ, ಆಕೆಗೆ ವಿಶ್ರಾಂತಿ ಬೇಕು ಎಂದು ಹೇಳಿ ಮನೆಯಲ್ಲಿ ಬಿಟ್ಟು, ನಂತರ ಆ ರಾತ್ರಿ ಮತ್ತೊಂದು IV ಡೋಸ್ ನೀಡಲು ಬಂದಿದ್ದ, ಏಪ್ರಿಲ್ 23 ರಂದು, ಕೃತಿಕಾ IV ಇಂಜೆಕ್ಷನ್ ನೋವಿನ ಬಗ್ಗೆ ಹೇಳಿಕೊಂಡಿದ್ದಳು. ಅದೇ ದಿನ ರಾತ್ರಿ 9.30 ರ ಸುಮಾರಿಗೆ, ಔಷಧಿ ನೀಡಲು ಅವಳ ಕೋಣೆಗೆ ಹೋಗಿ ಮತ್ತೊಂದು ಡೋಸ್ ಔಷಧ ನೀಡಿದ್ದ, ಮರುದಿನ, ಏಪ್ರಿಲ್ 24 ರಂದು ಬೆಳಿಗ್ಗೆ, ಕೃತಿಕಾ ಸಂಪೂರ್ಣ ಅಸ್ವಸ್ಥಗೊಂಡಿದ್ದರು.
ಈ ವೇಳೆ ಕುಟುಂಬಸ್ಥರೆಲ್ಲರೂ ಭೀಯಭೀತರಾಗಿದ್ದೆವು. ಆಗ ಮಹೇಂದ್ರ ರೆಡ್ಡಿ ವೈದ್ಯನಾಗಿದ್ದರೂ ಆಕೆಗೆ ಸಿಪಿಆರ್ ಮಾಡಲಿಲ್ಲ. ಬಳಿಕ ಕೃತಿಕಾಳ ಪರಿಸ್ಥಿತಿ ನೋಡಿ ನಾವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದವು. ಅಲ್ಲಿ ವೈದ್ಯರು ಆಕೆಯನ್ನು ಪರೀಕ್ಷಿಸಿ ಅದಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು’ ಎಂದು ಮುನಿ ರೆಡ್ಡಿ ಆರೋಪಿಸಿದರು.
ಇನ್ನು ಕೃತಿಕಾಳ ಮರಣದ ನಂತರ, ಮಹೇಂದ್ರ ಮತ್ತು ಅವರ ಕುಟುಂಬವು ಮರಣೋತ್ತರ ಪರೀಕ್ಷೆ ಬೇಡ ಎಂದು ಹೇಳಿತ್ತು. ಮರಣೋತ್ತರ ಪರೀಕ್ಷೆ ನಡೆಸದಂತೆ ಮಾವ ಮುನಿರೆಡ್ಡಿ ಅವರ ಮನವೊಲಿಸಿದ್ದರು. ಆದರೆ ಕೃತಿಕಾ ಅವರ ಅಕ್ಕ ಡಾ. ನಿಕಿತಾ ರೆಡ್ಡಿ ಅವರು ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದರು. ವಿವರವಾದ ತನಿಖೆಗೆ ಒತ್ತಾಯಿಸಿದರು. ನಂತರ ಅವರು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ದೂರು ದಾಖಲಿಸಿದ್ದು ಪೊಲೀಸರು ಸಾವಿನ ತನಿಖೆ ಕೈಗೊಂಡಿದ್ದಾರೆ.