ಬೆಂಗಳೂರು: ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರು ಲೋಕಾಯುಕ್ತ ವ್ಯಾಪ್ತಿಗೆ ಒಳಪಡಲಿದ್ದು, ಅವರ ವಿರುದ್ಧವೂ ಲೋಕಾಯುಕ್ತರು ತನಿಖೆ ನಡೆಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧದ ಲೋಕಾಯುಕ್ತ ವರದಿ ಆಧರಿಸಿ ಕೈಗೊಳ್ಳಲಾಗಿದ್ದ ತನಿಖೆ ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬೈರಶೆಟ್ಟಿಹಳ್ಳಿಯ ಶ್ರೀ ಬಾಲಾಂಜನೇಯ ಪ್ರೌಢಶಾಲೆ ಗ್ರಂಥಪಾಲಕ ಬಿ.ಲಕ್ಷ್ಮೀನಾರಾಯಣ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ .ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಸರ್ಕಾರದಿಂದ ಅನುದಾನ ಪಡೆಯುವ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರನ್ನು ಸರ್ಕಾರಿ ಸಿಬ್ಬಂದಿಯ ಭಾಗವೆಂದೇ ಪರಿಗಣಿಸಿರುವ ಹೈಕೋರ್ಟ್‌ನ ಪೂರ್ವ ನಿದರ್ಶನಗಳಿವೆ. ಅವರ ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳನ್ನು ಸರ್ಕಾರವೇ ನಿಯಂತ್ರಿಸುತ್ತದೆ. ಹೀಗಾಗಿ, ಅರ್ಜಿದಾರರ ವಿರುದ್ಧವೂ ಲೋಕಾಯುಕ್ತ ತನಿಖೆ ನಡೆಸಬಹುದು’ ಎಂದು ನ್ಯಾಯಪೀಠವು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 12(3)ರಡಿ ನೀಡಿರುವ ವರದಿ ಮತ್ತು ಸಿಸಿಎ ನಿಯಮ 14ಎ ಅಡಿ ತನಿಖೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶಗಳು ಸರಿ ಇದೆ’ ಎಂದು ನ್ಯಾಯಪೀಠ ವಿವರಿಸಿದೆ.
ಏನಿದು ಪ್ರಕರಣ?: ಶಾಲಾ ಆಡಳಿತ ಮಂಡಳಿಯಿಂದ ಅಗತ್ಯ ಅನುಮತಿ ಪಡೆಯದೆ ಬಿ.ಲಕ್ಷ್ಮೀನಾರಾಯಣ ಇತರ ನಾಲ್ವರು 2004 ಮತ್ತು 2005ರಲ್ಲಿ ವಾಜರಹಳ್ಳಿ ಹಾಗೂ ನೆಲಮಂಗಲ ವ್ಯಾಪ್ತಿಯಲ್ಲಿ ಜಮೀನು ಖರೀದಿ ಮಾಡಿದ್ದಾರೆ ಎಂದು 2013ರಲ್ಲಿ ಲೋಕಾಯುಕ್ತದಲ್ಲಿ ದೂರು ಸಲ್ಲಿಕೆಯಾಗಿತ್ತು. ತಮ್ಮ ವಿರುದ್ಧದ ಲೋಕಾಯುಕ್ತ ವರದಿ ಆಧರಿಸಿ ಕೈಗೊಳ್ಳಲಾಗಿದ್ದ ತನಿಖೆ ಪ್ರಶ್ನಿಸಿ ಬಿ.ಲಕ್ಷ್ಮೀನಾರಾಯಣ ಹೈಕೋರ್ಟ್ ಮೊರೆ ಹೋಗಿದ್ದರು.