ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕಾರಿಯೊಬ್ಬರಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 70 ಲಕ್ಷ ರು. ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಬಿಎಂಟಿಸಿ ವಿಭಾಗೀಯ ಸಂಚಾರ ನಿಯಂತ್ರಕ ಕೆ.ಬಿ.ರಾಮಕೃಷ್ಣ ರೆಡ್ಡಿ ಶಿಕ್ಷೆಗೆ ಗುರಿಯಾದವರು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪದಡಿ 2014ನೇ ಸಾಲಿನಲ್ಲಿ ಕೆ.ಬಿ.ರಾಮಕೃಷ್ಣ ರೆಡ್ಡಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಕೆ.ಬಿ.ರಾಮಕೃಷ್ಣ ರೆಡ್ಡಿ ಅವರು ಆದಾಯಕ್ಕಿಂತ ಅಧಿಕ ಮೌಲ್ಯದ ಆಸ್ತಿ ಹೊಂದಿರುವುದನ್ನು ಬಯಲಿಗೆ ತಂದಿದ್ದರು. ಈ ಸಂಬಂಧ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯವು ಅ.31ರಂದು ಆರೋಪಿ ಕೆ.ಬಿ.ರಾಮಕೃಷ್ಣ ರೆಡ್ಡಿಗೆ ಮೂರು ವರ್ಷ ಕಠಿಣ ಸಜೆ ಹಾಗೂ 70 ಲಕ್ಷ ರು. ದಂಡ ವಿಧಿಸಿ ಅಂತಿಮ ತೀರ್ಪು ನೀಡಿದೆ. ಲೋಕಾಯುಕ್ತ ಪೊಲೀಸರ ಪರವಾಗಿ ಸರ್ಕಾರಿ ಅಭಿಯೋಜಕ ಮಂಜುನಾಥ ಹೊನ್ನಯ್ಯ ನಾಯಕ್ ಅವರು ವಾದ ಮಂಡಿಸಿದ್ದರು.