ಸುದ್ದಿ

ಸಿಎಂಆರ್‌ಐಟಿಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಮತ್ತು “ಐಸಿರಿ – ೨೫” ಸಾಂಸ್ಕೃತಿಕ ಕಲರವ

Share It

ಹೆತ್ತವ್ವ ಮತ್ತು ಮಾತೃಭಾಷೆ ಎರಡು ಕೂಡ ಮನುಷ್ಯ ಸಂವೇದನೆಯ ಸಾಕ್ಷಿಪ್ರಜ್ಞೆಯಾಗಿ ನಮ್ಮನ್ನ ಸಲಹುತ್ತವೆ’: ನಾಗತಿಹಳ್ಳಿ ರಮೇಶ್

ವಿಶೇಷ ಅತಿಥಿಗಳಾಗಿ ಪಾಲ್ಗೊಂಡು “ಐಸಿರಿ-೨೫” ಕನ್ನಡ ಸಾಂಸ್ಕೃತಿಕ ಹಬ್ಬಕ್ಕೆ ಮೆರುಗು ತುಂಬಿದ ಕವಿ,ಚಿಂತಕ ನಾಗತಿಹಳ್ಳಿ ರಮೇಶ್ ಹಾಗೂ ಕಾಂತಾರ ಚಾಪ್ಟರ್-೧ ಚಿತ್ರದ ನಟಿ, ರೂಪದರ್ಶಿ ಐರಾ ಕೃಷ್ಣ

ಬೆಂಗಳೂರು: ೨೫ನೇ ವರ್ಷದ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ ‘ಸಂಸ್ಕೃತಿ ಕನ್ನಡ ಸಂಘ’ ೭೦ನೇ ಕನ್ನಡ ರಾಜ್ಯೋತ್ಸವವನ್ನು “ಐಸಿರಿ-೨೫” ಹೆಸರಿನಲ್ಲಿ  ಅದ್ದೂರಿಯಾಗಿ ಆಚರಿಸಿತು.

ನಗರದ ಐಟಿ ಪಾಕ್೯ ರಸ್ತೆಯಲ್ಲಿರುವ  ಸಿಎಂಆರ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ “ಐಸಿರಿ-೨೫” ಕನ್ನಡ ಸಾಂಸ್ಕೃತಿಕ ಹಬ್ಬವನ್ನು ಕವಿ, ಚಿಂತಕ ನಾಗತಿಹಳ್ಳಿ ರಮೇಶ್ ಹಾಗೂ ಕಾಂತಾರ ಚಾಪ್ಟರ್-1 ಸಿನಿಮಾದ ನಟಿ ಮತ್ತು ರೂಪದರ್ಶಿ ಐರಾ ಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕವಿ, ಚಿಂತಕ ಶ್ರೀ ನಾಗತಿಹಳ್ಳಿ ರಮೇಶ್ ಅವರು ಹೆತ್ತವ್ವ ಮತ್ತು ಮಾತೃಭಾಷೆ ಎರಡು ಕೂಡ ಮನುಷ್ಯ ಸಂವೇದನೆಯ ಸಾಕ್ಷಿಪ್ರಜ್ಞೆಯಾಗಿ ನಮ್ಮನ್ನ ಸಲಹುತ್ತವೆ. ಹಡೆದ ತಾಯಿಯಷ್ಟೆ ಸಮಾನವಾಗಿ ಮಾತೃಭಾಷೆಯನ್ನು ಪ್ರತಿಯೊಬ್ಬರು ಗೌರವಿಸಬೇಕು, ಪ್ರೀತಿಸಬೇಕು. ಭಾವನಾತ್ಮಕ ಸಂಬಂಧಗಳನ್ನು ಪರಸ್ಪರ ಕಟ್ಟುವ ಗುಣ ಮಾತೃಭಾಷೆಗಿದೆ. ಈ ನಿಟ್ಟಿನಲ್ಲಿ ಈ ನೆಲದಲ್ಲಿ ಬದುಕುವ ಪ್ರತಿಯೊಬ್ಬರು ಕನ್ನಡವನ್ನು ಉಳಿಸಿ-ಬೆಳಸಬೇಕು ಎಂದು ಹೇಳಿದರು.

ಕಾಂತಾರ ಚಾಪ್ಟರ್-1 ಚಿತ್ರದ ನಟಿ,ಸೈಲೆಂಟ್ ಸುಂದರಿ ಎಂದೇ ಖ್ಯಾತರಾದ ಐರಾ ಕೃಷ್ಣ ಅವರು ಸಿನಿಮಾದ ಸಕ್ಸಸ್ ಅನುಭವ ಮತ್ತು ಶೂಟಿಂಗ್ ಅನುಭವಗಳನ್ನು ಹಂಚಿಕೊಂಡರು. ಸಿನಿಮಾ ಕುರಿತು ವಿದ್ಯಾರ್ಥಿಗಳು ಕೇಳಿದ ಪಟಾಕಿ ಪ್ರಶ್ನೆಗಳಿಗೆ ಚುಟುಕು ಉತ್ತರ ನೀಡಿ ರಂಜಿಸಿದರು.

ಕಾಲೇಜು ಆವರಣದಲ್ಲಿ ಹಳದಿ, ಕೆಂಪು ಬಣ್ಣದ ಬಾವುಟದ ತೋರಣಗಳನ್ನು ಕಟ್ಟಿ, ನೆಲದ ಮೇಲೆ ರಂಗೋಲಿ ಹಾಕಿ ಅಲಂಕರಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಂಪ್ರದಾಯಿಕ ಹಳದಿ,ಕೆಂಪು ಬಣ್ಣದ ಉಡುಪುಗಳನ್ನು ತೊಟ್ಟು ಕಂಗೊಳಿಸಿದರು.

“ಐಸಿರಿ-೨೫” ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ನಾಡು-ನುಡಿ, ಪರಂಪರೆ, ಜನಪದ, ಸಾಹಿತ್ಯ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕವಿ,ಚಿಂತಕ ನಾಗತಿಹಳ್ಳಿ ರಮೇಶ್ ಮತ್ತು ನಟಿ ಐರಾ ಕೃಷ್ಣ ಅವರಿಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಬಿ.ನರಸಿಂಹ ಮೂರ್ತಿ ಮತ್ತು ಡೀನ್ ಡಾ.ಚಿತ್ರ ಅವರು “ಐಸಿರಿ-೨೫” ಫಲಕ ನೀಡಿ ಗೌರವಿಸಿದರು.


Share It

You cannot copy content of this page