ಸುದ್ದಿ

ತಂದೆಯ ಇಚ್ಛೆಗೆ ವಿರುದ್ಧವಾಗಿ ನಡೆದು ಕೊಂಡರೆ ಅಪ್ಪನು ಮಗಳನ್ನು ಆಸ್ತಿಯ ವಿಲ್‌ನಿಂದ ಹೊರಗಿಡಬಹುದು: ಸುಪ್ರೀಂಕೋರ್ಟ್

Share It

ನವದೆಹಲಿ:  ಮಗಳು ಅಪ್ಪನ ಇಚ್ಛೆಗೆ ವಿರುದ್ಧವಾಗಿ ಬೇರೆ ಧರ್ಮದವನನ್ನು ಮದುವೆಯಾದರೆ ಅಥವಾ ಮಗಳು ಅಪ್ಪನಿಗೆ ನೋವುಂಟಾಗುವಂತೆ ವರ್ತಿಸಿದರೆ ತಂದೆ ತನ್ನ ಮಗಳನ್ನು ಆಸ್ತಿಯ ವಿಲ್‌ನಿಂದ ಹೊರಗಿಡಬಹುದು. ಇದರಲ್ಲಿ ನ್ಯಾಯಾಲಯ  ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂಕೋಟ್೯ ಹೇಳಿದೆ.

ಹೊಸ ಕಾನೂನು ಹೆಣ್ಣುಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕಿನ ಅವಕಾಶ ನೀಡಿದೆ. ಹೀಗಿದ್ದರೂ, ಒಂದುವೇಳೆ ಮಗಳು ಸಮುದಾಯದಿಂದ ಹೊರಗೆ ವಿವಾಹವಾದರೆ ಅಥವಾ ಅಪ್ಪನ ಇಚ್ಚೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದರೆ ಆಕೆಗೆ ಆಸ್ತಿಯಲ್ಲಿ ಪಾಲು ನೀಡಲೇಬೇಕೆಂದೇನೂ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಅಪ್ಪನ ನಿರ್ಧಾರವೇ ಸರ್ವೋಚ್ಚವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ನ್ಯಾಯ ಪೀಠವು ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯವು ಶೈಲಾ ಜೋಸೆಫ್‌ಗೆ ಅವರ ತಂದೆ ಎನ್.ಎಸ್. ಶ್ರೀಧರನ್ ಅವರ ಆಸ್ತಿಯಲ್ಲಿ ಪಾಲು ನೀಡಬೇಕು ಎಂಬ ತೀರ್ಪನ್ನು ರದ್ದುಗೊಳಿಸಿದೆ. ಆ ಮಹಿಳೆ ಬೇರೆ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಹೀಗಾಗಿ, ಆಕೆಯ ತಂದೆ ಶ್ರೀಧರನ್ ತನ್ನ ಮಗಳನ್ನು ದೂರವೇ ಇಟ್ಟಿದ್ದರು. ತಮ್ಮ ವಿಲ್‌ನಲ್ಲಿ ಕೂಡ ಆಕೆಗೆ ಪಾಲು ಬರೆದಿರಲಿಲ್ಲ.
ಇದನ್ನು ವಿರೋಧಿಸಿ, ತನ್ನ ತಂದೆಯ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಆಕೆ ಮೇಲ್ಮನವಿ ಹೋಗಿದ್ದರು.

ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಅವರ
ಇತರ 8 ಸಹೋದರರೊಂದಿಗೆ ಸಮಾನ ಪಾಲು
ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ, ಸುಪ್ರೀಂ
ಕೋರ್ಟ್ ಕೆಳ ನ್ಯಾಯಾಲಯದ ಈ ತೀರ್ಪನ್ನು
ರದ್ದುಗೊಳಿಸಿದೆ. ವಿಲ್ ಪ್ರಕಾರ ಶೈಲಾ ಅವರಿಗೆ
ಅವರ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ
ಎಂದು ತೀರ್ಪು ನೀಡಿದೆ.

“ಇದು ಆಕೆಯ ತಂದೆ ಸ್ವಇಚ್ಛೆಯಿಂದ ಬರೆದಿರುವ ವಿಲ್. ಇದರಲ್ಲಿ ಯಾವುದೇ ಹಸ್ತಕ್ಷೇಪ ಸಾಧ್ಯವಿಲ್ಲ. ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಲಾಗಿದೆ. ಶೈಲಾ ತನ್ನ ತಂದೆಯ ಆಸ್ತಿಗಳ ಮೇಲೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಎಲ್ಲ ಆಸ್ತಿಯನ್ನೂ ಆಕೆಯ ತಂದೆಯ ಇಚ್ಛೆಯ ಪ್ರಕಾರವೇ ಆಕೆಯ ಇತರ ಸಹೋದರರಿಗೆ ಉಯಿಲು (ವಿಲ್) ಮೂಲಕ ನೀಡಲಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

“ಮಹಿಳೆಗೂ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಆದರೆ, ಈ ಪ್ರಕರಣದಲ್ಲಿ ವಿಲ್ ಬರೆದ ವ್ಯಕ್ತಿಯ ಇಚ್ಛೆ ಮುಖ್ಯವಾಗಿದೆ. ಅವರೇನಾದರೂ ವಿಲ್ ಬರೆಯದೇ ಇದ್ದಿದ್ದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೂ ಪಾಲು ಇರುತ್ತಿತ್ತು. ಆದರೆ, ಅವರು ಮಗಳಿಗೆ ಆಸ್ತಿ ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ವಿಲ್ ಬರೆದಿರುವುದರಿಂದ ಮತ್ತು ಇದು ಅವರ ಕೊನೆಯ ವಿಲ್ ಆಗಿರುವುದರಿಂದ ಅವರ ನಿರ್ಧಾರವೇ ಅಂತಿಮವಾಗಿರುತ್ತದೆ. ಕಾನೂನು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ” ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.


Share It

You cannot copy content of this page