ಬೆಂಗಳೂರು: ಧರ್ಮ, ದೇವರ ಹೆಸರಲ್ಲಿ ಸರಕಾರಿ ಜಾಗವನ್ನು ಅತಿಕ್ರಮಿಸಲು ಹಾಗೂ ರಿಯಲ್ ಎಸ್ಟೇಟ್ ಮಾಡಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಹೇಳಿದೆ.
ಕೋಲಾರ ಜಿಲ್ಲೆ ಕ್ಯಾಲನೂರು ಗ್ರಾಮದ ಸರಕಾರಿ ಶಾಲೆಯ ಕಾಂಪೌಂಡ್ ಗೋಡೆ ಹಾಗೂ ಗ್ರಾಮದ ಸರ್ಕಾರಿ ರಸ್ತೆಯ ಜಾಗದಲ್ಲಿ ಕಟ್ಟಲಾಗಿರುವ ಮಳಿಗೆಗಳ ತೆರವಿಗೆ ಕೋಲಾರ ತಹಶಿಲ್ದಾರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ, ಗ್ರಾಮದ ಹಿಂದೂ ಸೇವಾ ಚಾರಿಟೆಬಲ್ ಟ್ರಸ್ಟ್ ಹಾಗೂ ಜಾಮಿಯಾ ಮಸ್ಜಿದ್ ಕಮಿಟಿ ಜಂಟಿಯಾಗಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಮೇಲಿನಂತೆ ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರರು ಸರ್ಕಾರಿ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಿರುವುದನ್ನು ತಿಳಿದು ಪ್ರತಿಕ್ರಿಯಿಸಿದ ನ್ಯಾಯಪೀಠ ಸರ್ಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳ ಕೆಲಸ ಏನಿದೆ?,ಈ ರೀತಿ ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಅತಿಕ್ರಮಿಸುವುದಕ್ಕೆ ಮತ್ತು ದೇವರ ಹೆಸರಲ್ಲಿ ಎಸ್ಟೇಟ್ ಗೆ ಅವಕಾಶ ನೀಡಲಾಗದು. ಎರಡೂ ಧರ್ಮದವರು ಅರ್ಜಿ ಸಲ್ಲಿಸಿದ್ದಾರೆ. ‘ರಾಮ್-ರಹೀಮ್’ ಸೇರಿ ಬಂದಿರುವುದೇ ಅನುಮಾನ ಹುಟ್ಟುಹಾಕುತ್ತಿದೆ ಎಂದು ನ್ಯಾಯಪೀಠ ತೀಕ್ಷ್ಯವಾಗಿ ಹೇಳಿತು.
ಅರ್ಜಿದಾರರ ಪರ ವಕೀಲರು, ಗ್ರಾಮದಲ್ಲಿರುವ ಖಾಲಿ ಜಾಗವನ್ನು ದಶಕದಿಂದ ಎರಡು ಸಂಸ್ಥೆಗಳು ದೇಣಿಗೆಯಿಂದ ನಿರ್ವಹಣೆ ಮಾಡಿಕೊಂಡು ಬಂದಿವೆ. ಈ ಜಾಗದಲ್ಲಿ ಮಳಿಗೆ ನಿರ್ಮಿಸಲಾಗಿದೆ. ಈ ಜಾಗವನ್ನು ಅರ್ಜಿದಾರರ ಸಂಸ್ಥೆಗಳಿಗೆ ಮಂಜೂರು ಮಾಡಬೇಕು ಎಂದು 2015ರಲ್ಲಿ ಸ್ಥಳೀಯ ಗ್ರಾಮ ಪಂಚಾಯತ್‌ನಲ್ಲಿ ನಿರ್ಣಯ ಆಗಿದೆ. ಈ ನಡುವೆ, ಮಳಿಗೆ ತೆರವಿಗೆ ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದರು.
ಜಾಗ ಮಂಜೂರು ಪ್ರಸ್ತಾವನೆ ಜಿಲ್ಲಾಧಿಕಾರಿ ಮುಂದಿದ್ದರೆ ಅವರ ಬಳಿಗೆ ಹೋಗಿ, ಸದ್ಯಕ್ಕಂತೂ ಜಾಗ ಸರಕಾರಕ್ಕೆ ಸೇರಿದ್ದು ಎಂದು ನ್ಯಾಯಪೀಠ ಹೇಳಿತು. ಅರ್ಜಿದಾರರ ಪ್ರಾಮಾಣಿಕತೆಯ ಕುರಿತು ಮಾಹಿತಿ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿತು.