ನವದೆಹಲಿ: ಬಾಕಿ ಪ್ರಕರಣಗಳ ಇತ್ಯರ್ಥ ಹಾಗೂ ತೀರ್ಪು ಪ್ರಕಟಣೆಗೆ ತಾವು ತೆಗೆದುಕೊಂಡ ಕಾಲಾವಧಿಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ.
ಜೀವಾವಧಿ ಶಿಕ್ಷೆಗೆ ಒಳಗಾದ ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗದ (ಒಬಿಸಿ) ನಾಲ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯ್‌ಮಲ್ಯ ಬಗ್ಗಿ ಅವರನ್ನು ಒಳಗೊಂಡ ನ್ಯಾಯ ಪೀಠವು ಈ ಸೂಚನೆ ನೀಡಿದೆ.
ತಾವು ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ ಮೇಲೂ ತೀರ್ಪು ಪ್ರಕಟಿಸಲಿಲ್ಲ ಹಾಗೂ ಪ್ರಕರಣಗಳ ತೀರ್ಪು ಪ್ರಕಟಿಸಲು ಕಾಯ್ದಿಟ್ಟು 2 ರಿಂದ 3 ವರ್ಷವಾದರೂ ಜಾರ್ಖಂಡ್ ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಿಲ್ಲ ಎಂದು ಈ ನಾಲ್ವರೂ ಸುಪ್ರೀಂಕೋರ್ಟ್ ಗೆ ದೂರು ಸಲ್ಲಿಸಿದ್ದರು. ‘ಯಾವುದೇ ನ್ಯಾಯಾಧೀಶರಾದರೂ ಅವರು ತೀರ್ಪು ಪ್ರಕಟಿಸಲು ಎಷ್ಟು ಪ್ರಕರಣಗಳನ್ನು ಕಾಯ್ದಿಟ್ಟುಕೊಂಡಿದ್ದಾರೆ. ಎಷ್ಟು ಪ್ರಕರಣಗಳ ತೀರ್ಪು ಪ್ರಕಟಿಸಿದ್ದಾರೆ ಮತ್ತು ಅವುಗಳ ಪ್ರಕಟಣೆಗೆ ಅವರು ತೆಗೆದುಕೊಂಡ ಕಾಲಾವಧಿ ಎಷ್ಟು ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗಲಿ’ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಎಲ್ಲಾ ನ್ಯಾಯಾಧೀಶರಿಗು ತಾವು ನಿಭಾಯಿಸಿದ ಪ್ರಕರಣಗಳು, ತೀರ್ಪು ಪ್ರಕಟಣೆಗೆ ತಾವು ತೆಗೆದುಕೊಂಡ ಕಾಲಾವಧಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.