ಬೆಂಗಳೂರು: ನವದಂಪತಿ ಗಾನವಿ-ಸೂರಜ್ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಗಂಭೀರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶ್ರೀಲಂಕಾಗೆ ಹನಿಮೂನ್‌ಗೆ ಹೋಗಿ ಅರ್ಧಕ್ಕೆ ವಾಪಸಾಗಿದ್ದ ನವವಿವಾಹಿತೆ ಗಾನವಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ನಂತರ ವರದಕ್ಷಿಣೆ ಕಿರುಕುಳದ ಆರೋಪ ಎದುರಿಸುತ್ತಿದ್ದ ಗಾನವಿ ಪತಿ ಸೂರಜ್ ಕೂಡ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಇದೀಗ ಗಾನವಿ ಕುಟುಂಬದ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.
ಮೃತ ಸೂರಜ್ ಕುಟುಂಬಸ್ಥರು ಮಾಡಿರುವ ಗಂಭೀರ ಆರೋಪದ ಪ್ರಕಾರ, ಗಾನವಿ ಮದುವೆಗೂ ಮುನ್ನ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಮನೆಯವರ ಒತ್ತಾಯಕ್ಕೆ ಮಣಿದು ಆಕೆ ಸೂರಜ್ ನನ್ನು ಮದುವೆಯಾಗಿದ್ದಳು, ಶ್ರೀಲಂಕಾಗೆ ಹನಿಮೂನ್‌ಗೆ ಹೋದ ಸಂದರ್ಭದಲ್ಲಿ ಗಾನವಿ ತನ್ನ ಹಳೆಯ ಪ್ರೀತಿ ವಿಚಾರವನ್ನು ಸೂರಜ್ ಬಳಿ ಬಾಯಿಬಿಟ್ಟಿದ್ದಳು. ಈ ವಿಷಯ ಕೇಳಿ ಆಘಾತಕ್ಕೊಳಗಾದ ಸೂರಜ್, ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಮರಳಿದ್ದರು ಎನ್ನಲಾಗಿದೆ.
ಬೆಂಗಳೂರಿಗೆ ಬಂದ ನಂತರ ಗಾನವಿ ತನ್ನ ತವರು ಮನೆಗೆ ತೆರಳಿದ್ದು, ಡಿ.24ರಂದು ಆತ್ಮಹತ್ಯೆಗೆ
ಶರಣಾಗಿದ್ದಾಳೆ. ಇದರ ಬೆನ್ನಲ್ಲೇ ಗಾನವಿ ತಾಯಿ ರುಕ್ಕಿಣಿ ಅವರು ಸೂರಜ್ ಮತ್ತು ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಸೂರಜ್ ಲೈಂಗಿಕವಾಗಿ ಅಸಮರ್ಥ ಎಂದು ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದರು. ಈ ಅವಮಾನ ಹಾಗೂ ಸುಳ್ಳು ಆರೋಪಗಳಿಂದ ನೊಂದ ಸೂರಜ್ ಮತ್ತು ಆತನ ತಾಯಿ ಜಯಂತಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಅಲ್ಲಿನ ಲಾಡ್ಜ್ ವೊಂದರಲ್ಲಿ ಸೂರಜ್ ಆತ್ಮಹತ್ಯೆ ಮಾಡಿಕೊಂಡರೆ, ಸೂರಜ್ ತಾಯಿ ಜಯಂತಿ ಅವರು ಸಾವಿನ ಕದ ತಟ್ಟಿದ್ದರು.
ಈಗ ಸೂರಜ್ ಭಾವ ರಾಜ್ ಕುಮಾರ್ ಅವರು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಗಾನವಿಯ ಪ್ರೇಮ ವಿಚಾರವನ್ನು ಮುಚ್ಚಿಟ್ಟು ಸೂರಜ್ ಮೇಲೆ ಸುಳ್ಳು ಅಪಪ್ರಚಾರ ಮಾಡಲಾಗಿದೆ. ಸೂರಜ್ ಸಾವಿಗೆ ಗಾನವಿ, ಆಕೆಯ ತಾಯಿ ರುಕ್ಕಿಣಿ, ಬಾಬುಗೌಡ, ರಾಧಾ ಹಾಗೂ ಸತೀಶ್ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.