ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ AMC ಕಾಲೇಜಿನಲ್ಲಿ ಕನ್ನಡದಲ್ಲಿ ಮಾತನಾಡಬಾರದು ಎಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿ ಉದ್ದಟತನ ಮೆರೆದಿದ್ದ ಕಾಲೇಜು ಹಾಸ್ಟೆಲ್ ವಾರ್ಡನ್ ವಿರುದ್ಧ ನೂರಾರು ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದ ಪರಿಣಾಮ ಕಾಲೇಜು ಆಡಳಿತ ವಾರ್ಡನ್ ಅನ್ನು ಕೆಲಸದಿಂದ ವಜಾ ಮಾಡಿದೆ. ಅಲ್ಲದೆ ವಾರ್ಡನ್ ವಿರುದ್ಧ ಎಫ್ಐಆರ್ ಆಗಿದ್ದು ಪೊಲೀಸರು ಬಂಧಿಸಿದ್ದಾರೆ.
ಕನ್ನಡ ವಿರೋಧಿ ಧೋರಣೆ ಹೊಂದಿದ್ದ ಹಾಸ್ಟಲ್ ವಾರ್ಡನ್ ಕನ್ನಡದಲ್ಲಿ ವಿದ್ಯಾರ್ಥಿಗಳು ಮಾತನಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಾಲೇಜು ಆವರಣದಲ್ಲಿ ಕನ್ನಡ ಮಾತನಾಡದಂತೆ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿ, ಬೈದು ದುರ್ವರ್ತನೆ ಮೆರೆದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಘಟನೆಯಿಂದ ಆಕ್ರೋಶಗೊಂಡ ಕನ್ನಡಪರ ಹೋರಾಟಗಾರರು ಕಾಲೇಜು ಮುಂದೆ ತೀವ್ರ ಪ್ರತಿಭಟನೆ ನಡೆಸಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಕಾಲೇಜಿನ ಪ್ರಾಂಶುಪಾಲರು ಹಾಸ್ಟೆಲ್ ವಾರ್ಡನ್ ಅನ್ನು ಸ್ಥಳದಲ್ಲೆ ವಜಾಗೊಳಿಸಿದರು.
ಜೊತೆಗೆ ಆ ಜಾಗದಲ್ಲಿ ಕನ್ನಡಿಗನ ನೇಮಕ ಮಾಡಲು ಕಾಲೇಜು ಮಂಡಳಿ ಒಪ್ಪಿಗೆ ನೀಡಿತು.
ಜೊತೆಗೆ ಕಾಲೇಜಿನಲ್ಲಿ ಇನ್ನು ಮುಂದೆ ಕನ್ನಡಿಗರ ಮೇಲೆ ದಬ್ಬಾಳಿಕೆಯಾಗದಂತೆ ಎಚ್ಚರ ವಹಿಸುತ್ತೇವೆ. ಕನ್ನಡ ನಾಡು-ನುಡಿಯನ್ನು ಗೌರವಿಸುತ್ತೇವೆ ಎಂದು ಕಾಲೇಜು ಆಡಳಿತ ಮಂಡಳಿ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿತು.