ಬೆಂಗಳೂರು: ಐಪಿಸಿ 498ಎ (ವಿವಾಹಿತ ಮಹಿಳೆಯ ಮೇಲೆ ಕ್ರೌರ್ಯ ಮತ್ತು ಕಿರುಕುಳ) ಕಾನೂನುಬದ್ಧವಾಗಿ ವಿವಾಹವಾಗಿರುವ ಪತಿಗೆ ಮಾತ್ರ ಸೀಮಿತವಾಗದೆ,ಪರಸ್ಪರ ಒಪ್ಪಿತ ಲಿವ್-ಇನ್(ಪುರುಷ-ಮಹಿಳೆ ವಿವಾಹವಾಗದೆ ಒಟ್ಟಿಗೆ ಇರುವುದು) ಸಂಬಂಧಗಳಿಗೂ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಮಹಿಳೆಯೊಬ್ಬರು(ಎರಡನೇ ಪತ್ನಿ) ದಾಖಲಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ರದ್ದು ಮಾಡುವಂತೆ ಕೋರಿ ಶಿವಮೊಗ್ಗದ ಡಾ.ಬಿ.ಎಚ್.ಲೋಕೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಪೀಠ ಈ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಅರ್ಜಿದಾರರು ಮತ್ತು ದೂರುದಾರರು ವೈವಾಹಿಕವಾಗಿ ಒಂದಾಗುವಂತಹ ಎಲ್ಲ ಲಕ್ಷಣಗಳನ್ನು ಹೊಂದಿದ್ದು, ಒಟ್ಟಾಗಿ ನೆಲೆಸಿ, ಸಹಬಾಳ್ವೆಯಿಂದ ನಡೆದುಕೊಂಡು ಪತಿ-ಪತ್ನಿ ಎಂಬುದಾಗಿ ಗುರುತಿಸಿಕೊಂಡು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಪತಿ-ಪತ್ನಿಯ ಹೊಂದಾಣಿಕೆಯಂತೆ ತೋರುವ ಈ ಸಂಬಂಧಕ್ಕೂ ಕ್ರೌರ್ಯ ನೀಡಿರುವುದು ಸಾಬೀತಾದಲ್ಲಿ ಐಪಿಸಿ ಸೆಕ್ಷನ್ 498(ಎ) ಅಡಿ ರಕ್ಷಣೆ ದೊರೆಯಲಿದೆ. ಈ ರೀತಿಯ ಆರೋಪವಿರುವ ಪ್ರಕರಣಗಳಲ್ಲಿ ಕಾನೂನುಬದ್ದ ಪತಿ-ಪತ್ನಿಯ ಸಂಬಂಧ ಹೊಂದಿರಬೇಕು ಎಂಬ ಅವಶ್ಯಕತೆ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಆರೋಪಿಯಾಗಿರುವ ಅರ್ಜಿದಾರರು ದೂರುದಾರರನ್ನು ಮೊದಲನೇ ಮದುವೆಯಾದ ಬಳಿಕ ಎರಡನೇ ಮದುವೆಯಾಗಿ ದುರುದ್ದೇಶದಿಂದ ವರ್ತಿಸಿದ್ದಾರೆ. ಬಳಿಕ ಮದುವೆಯಾಗಿಲ್ಲ ಎಂಬ ಕಾರಣ ನೀಡಿ ತನ್ನ ತಪ್ಪಿನಿಂದ ನುಣುಚಿಕೊಳ್ಳುವುದಕ್ಕೆ ಮುಂದಾಗಿದ್ದು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೀಠ ತಿಳಿಸಿತು.
ಅರ್ಜಿದಾರರು ಈಗಾಗಲೇ ಮದುವೆಯಾಗಿ ಮಗುವನ್ನು ಹೊಂದಿದ್ದರೂ, ಈ ಅಂಶವನ್ನು ಮರೆಮಾಚಿ ದೂರುದಾರ ಮಹಿಳೆಯೊಂದಿಗೆ ನೆಲೆಸಿದ್ದಾರೆ. ದೂರುದಾರರ ಕುಟುಂಬದಿಂದ ಚಿನ್ನಾಭರಣ ಮತ್ತು ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ದೂರುದಾರ ಮಹಿಳೆಗೆ ಮತ್ತಷ್ಟು ಹಣದ ಬೇಡಿಕೆಯಿಟ್ಟು ಕಿರುಕುಳ ನೀಡಿ ಹಿಂಸೆಗೆ ಒಳಪಡಿಸಲಾಗಿದೆ. ಇದೇ ಕಾರಣದಿಂದ ದೂರುದಾರರು ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಈ ಅಂಶಗಳು ನ್ಯಾಯಪೀಠದ ಮುಂದಿರುವಾಗ ಅರ್ಜಿದಾರರು ದೂರುದಾರರನ್ನು ಕಾನೂನುಬದ್ಧವಾಗಿ ವಿವಾಹವಾಗಿಲ್ಲ ಎಂಬ ವಾದ ಅಂಗೀಕರಿಸಿದರೆ ಅದು ಅನ್ಯಾಯವಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಅರ್ಜಿದಾರ ಪತಿ ತನ್ನ ಮೊದಲ ಮದುವೆಯನ್ನು ಮರೆಮಾಚುವ ಮೂಲಕ ಮಹಿಳೆಯನ್ನು ವಂಚಿಸುವ ಮತ್ತು ಅನೂರ್ಜಿತ ವಿವಾಹಕ್ಕೆ ಒಳಪಡಿಸುವ ಪುರುಷನು ಸೆಕ್ಷನ್ 498ಎ ಅಡಿಯಲ್ಲಿ ಕ್ರಿಮಿನಲ್ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಸಂದೇಶ ನೀಡುತ್ತದೆ. ಇದು ಕಾಯಿದೆಯ ಉದ್ದೇಶವನ್ನೇ ಕ್ಷೀಣಿಸುವುದಲ್ಲದೆ, ಅಮಾನ್ಯವಾಗಿರುವ ವೈವಾಹಿಕ ಸಂಬಂಧಗಳ ಸೋಗಿನಲ್ಲಿ ಮಹಿಳೆಯರ ವಂಚನೆ ಮತ್ತು ಶೋಷಣೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಅಂತಹ ಬೆಳವಣಿಗೆಗೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಪ್ರಕರಣದಲ್ಲಿ ದೂರುದಾರರು ಮತ್ತು ಅರ್ಜಿದಾರರ ಸಂಬಂಧ ಲಿವ್-ಇನ್ ಸಂಬಂಧವಿತ್ತು ಎಂಬ ವಾದ ಸಮರ್ಥನೀಯವಲ್ಲ. ಇಬ್ಬರ ಸಂಬಂಧ ಕಾನೂನುಬದ್ಧವಲ್ಲ ಎಂದರೂ, ಇಬ್ಬರೂ ಒಟ್ಟಾಗಿ ವಾಸಿಸುತ್ತಿದ್ದರು. ಮಹಿಳೆ ಕಿರುಕುಳಕ್ಕೆ ಒಳಗಾಗಿದ್ದಾರೆ. ಮೊದಲ ಮದುವೆ ಮರೆಮಾಚಿದ್ದರಿಂದ ದೂರುದಾರ ಮಹಿಳೆ ಕಾನೂನುಬದ್ಧವಾಗಿ ಮದುವೆ ಆಗಿದ್ದೇನೆ ಎಂಬ ನಂಬಿಕೆಯಲ್ಲಿದ್ದರು. ಅದರೆ, ಈ ಮದುವೆ ಅನೂರ್ಜಿತ ಎಂಬುದು ಪತಿಗೆ ಮಾತ್ರ ಗೊತ್ತಿರಲಿದೆ. ಆದರೆ, ಕ್ರೌರ್ಯದ ಆರೋಪವನ್ನು ಅನೂರ್ಜಿತ ಮದುವೆ ಎಂದು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅದು ಸೆಕ್ಷನ್ 498ಎ ಅಡಿಗೆ ಬರಲಿದೆ ಎಂದು ಪೀಠ ಹೇಳಿದೆ.